ಹೊಸದಿಲ್ಲಿ: ಜನಗಣತಿ ವೇಳೆ ಜಾತಿ ವಿವರಗಳನ್ನು ಸಂಗ್ರಹಿಸಲು ಕೇಂದ್ರ ಸರಕಾರ ರೂಪಿಸಿರುವ ವಿಧಾನದ ಬಗ್ಗೆ ಆಕ್ಷೇಪ ಎತ್ತಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕರಾಗಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಸ್ತಾವಿತ ವಿಧಾನವನ್ನು ಮರು ಪರಿಶೀಲಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
''ಸರಕಾರದ ಮಟ್ಟದಲ್ಲಿ ಪರಿಣಾಮಕಾರಿ ಸಾಮಾಜಿಕ ನ್ಯಾಯ ನೀತಿಗಳನ್ನು ರೂಪಿಸಲು, ವಿವಿಧ ಸಮುದಾಯಗಳ ಸಾಮಾಜಿಕ- ಆರ್ಥಿಕ ಸ್ಥಿತಿಗತಿಯ ಮೌಲ್ಯಮಾಪನ ಮಾಡಲು ವಿಶ್ವಾಸಾರ್ಹವಾದ ಜಾತಿಯ ಅಂಕಿ- ಅಂಶಗಳು ಅತ್ಯಗತ್ಯವಾಗಿವೆ. ನಿಮ್ಮ ಸರಕಾರ ಜನಗಣತಿಯಲ್ಲಿ ಜಾತಿಯ ಮಾಹಿತಿಯನ್ನು ದಾಖಲಿಸಲು ಮುಕ್ತ- ಅಂತ್ಯದ ಪ್ರಶ್ನೆಗಳನ್ನು ಬಳಸುವ ವಿಧಾನ ಆಯ್ಕೆ ಮಾಡಿಕೊಂಡಿರುವುದು ದಾರಿತಪ್ಪಿಸುವ ಕ್ರಮದಂತಿದೆ. ಕೂಡಲೇ ಜಾತಿ ಮಾಹಿತಿ ಸಂಗ್ರಹಿಸುವ ವಿಧಾನ ಬದಲಾವಣೆ ಮಾಡಬೇಕು,'' ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಖರ್ಗೆ, ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
''ಮುಕ್ತ- ಅಂತ್ಯದ ಪ್ರಶ್ನೆಗಳ ಸ್ವರೂಪ ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಒಂದೇ ಜಾತಿಯ ವಿಭಿನ್ನ ಹೆಸರುಗಳು, ಉಪಜಾತಿ ಹೆಸರುಗಳಿವೆ. ಕಾಗುಣಿತದ ವ್ಯತ್ಯಾಸದಲ್ಲೂ ಕೆಲವೊಂದು ಜಾತಿಗಳನ್ನು ಗುರುತಿಸಲಾಗಿದೆ. ಜನಗಣತಿಯ ಸಂದರ್ಭದಲ್ಲಿ ಮಾಹಿತಿ ನೀಡುವಾಗ ಒಂದೇ ಜಾತಿಯ ಸದಸ್ಯರು ವಿಭಿನ್ನ ಹೆಸರುಗಳನ್ನು ನೀಡಿದರೆ, ಅವುಗಳನ್ನು ಪ್ರತ್ಯೇಕ ಸಮುದಾಯಗಳೆಂದು ವರ್ಗೀಕರಿಸುವ ಅಪಾಯವಿದೆ. ಪರಿಣಾಮ ದೇಶದಲ್ಲಿ ಹೊಸದಾಗಿ ಲಕ್ಷಾಂತರ ಹೊಸ ಜಾತಿಗಳು ಸೃಷ್ಟಿಯಾಗಲಿವೆ. ಇದರಿಂದ ಜಾತಿಗಣತಿಯ ದತ್ತಾಂಶಗಳು ನಿರುಪಯುಕ್ತವಾಗಲಿವೆ,'' ಎಂದು ಪತ್ರದಲ್ಲಿ ಎಚ್ಚರಿಸಿದ್ದಾರೆ.
ವಿವಿಧ ಸಮುದಾಯಗಳ ಜನಸಂಖ್ಯೆಯ ತಪ್ಪು ಅಂದಾಜಿಗೆ ದಾರಿ
''ಜಾತಿಯ ಕುರಿತ ಅಸ್ಪಷ್ಟ ಮಾಹಿತಿ ವಿವಿಧ ಸಮುದಾಯಗಳ ಜನಸಂಖ್ಯೆಯ ಕುರಿತು ತಪ್ಪಾದ ಅಂದಾಜುಗಳಿಗೆ ಕಾರಣವಾಗಬಹುದು. ತಪ್ಪಾದ ಅಂಕಿಅಂಶಗಳು ಶಿಕ್ಷಣ, ಉದ್ಯೋಗ, ಕಲ್ಯಾಣ ಕಾರ್ಯಕ್ರಮಗಳು, ಅಭಿವೃದ್ಧಿ ಯೋಜನೆ ಮತ್ತು ಇತರ ಸಾಮಾಜಿಕ ನ್ಯಾಯದ ಯೋಜನೆ ರೂಪಿಸಬೇಕಾದ ಸರಕಾರದ ನೀತಿಗಳ ಮೇಲೂ ಅಡ್ಡ ಪರಿಣಾಮ ಬೀರಲಿದೆ,'' ಎಂದು ಖರ್ಗೆ, ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.
''ಪ್ರಸ್ತಾವಿತ ಜನಗಣತಿ ಪ್ರಶ್ನಾವಳಿಯಿಂದ 'ಇತರ ಹಿಂದುಳಿದ ವರ್ಗಗಳ' (OBC) ಜನಸಂಖ್ಯೆಯ ನಿಖರ ಮಾಹಿತಿ ಪಡೆಯಲು ಸಾಧ್ಯವಾಗುವುದಿಲ್ಲ. ಪ್ರಶ್ನಾವಳಿಯಲ್ಲಿ 'ಹಿಂದುಳಿದ ವರ್ಗ' ಎಂಬ ಕಲಂ ಸೇರಿಸದ ಕಾರಣ ಜಾತಿ ಸಂಬಂಧಿತ ದತ್ತಾಂಶಗಳ ಸಂಗ್ರಹಣೆ ಮತ್ತು ವರ್ಗೀಕರಣ ಮತ್ತಷ್ಟು ಸಂಕೀರ್ಣವಾಗಬಹುದು,'' ಎಂದು ಪತ್ರದಲ್ಲಿ ವಿವರಿಸಲಾಗಿದೆ.
''ನಾಗರಿಕರು ಸ್ವಯಂ ಜಾತಿಯ ವಿವರ ತುಂಬಲು ಮುಕ್ತ ಅವಕಾಶ ನೀಡುವ ಬದಲು ನಿರ್ದಿಷ್ಟ ಜಾತಿಗಳ ಪಟ್ಟಿಯನ್ನು ಬಳಸಬೇಕು,'' ಎಂದು ಒತ್ತಾಯಿಸಿರುವ ಕಾಂಗ್ರೆಸ್ ನಾಯಕರು, ''ಜಾತಿಯ ಹೆಸರುಗಳು, ಕಾಗುಣಿತಗಳು ಮತ್ತು ವರ್ಗೀಕರಣದಲ್ಲಿನ ವ್ಯತ್ಯಾಸ ಕಡಿಮೆ ಮಾಡಲು ಜನರೇ ಜಾತಿಯನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ 'ಡ್ರಾಪ್- ಡೌನ್' ಆಯ್ಕೆಯನ್ನು ಒದಗಿಸಬೇಕು,'' ಎಂದು ಸಲಹೆ ನೀಡಿದ್ದಾರೆ.
''ಅಸ್ತಿತ್ವದಲ್ಲಿರುವ ಸರಕಾರಿ ದಾಖಲೆಗಳ ಬಳಸಿಕೊಂಡು ಪ್ರಮಾಣಿತ ಜಾತಿಯ ಪಟ್ಟಿಯನ್ನು ಸಿದ್ಧಪಡಿಸಬೇಕು. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಗಳ ಕುರಿತು 'ಭಾರತೀಯ ಮಾನವ ಶಾಸ್ತ್ರೀಯ ಸಮೀಕ್ಷೆಯಲ್ಲಿ ಲಭ್ಯವಿರುವ ಮಾಹಿತಿಯನ್ನು ಒಳಗೊಳ್ಳಬಹುದು,'' ಎಂದು ಕಾಂಗ್ರೆಸ್ ನಾಯಕರು ಸರಕಾರಕ್ಕೆ ಸಲಹೆ ನೀಡಿದ್ದಾರೆ.
