ಯಡಿಯೂರಪ್ಪ ಆಪ್ತ, ಲಿಂಗಾಯತ ಮುಖಂಡ ಚಿಕ್ಕಮಗಳೂರಿನ ಹೆಚ್.ಡಿ.ತಮ್ಮಯ್ಯ ಕಾಂಗ್ರೆಸ್ ಸೇರ್ಪಡೆ: ಸಿ.ಟಿ ರವಿ ವಿರುದ್ಧ ಸ್ಪರ್ಧೆಯ ಸಾಧ್ಯತೆ !
ಬೆಂಗಳೂರು: ಬಿಜೆಪಿ ನಾಯಕ ಸಿ.ಟಿ ರವಿ ಅವರಿಗೆ ಸ್ವಕ್ಷೇತ್ರದಲ್ಲೇ ಕಾಂಗ್ರೆಸ್ ದೊಡ್ಡ ಶಾಕ್ ನೀಡಿದೆ. ಚಿಕ್ಕಮಗಳೂರು ಲಿಂಗಾಯತ ಮುಖಂಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಆಪ್ತ, ಬಿಜೆಪಿ ಜಿಲ್ಲಾ ಪ್ರಕೋಷ್ಟಗಳ ಸಂಯೋಜಕ ಹೆಚ್. ಡಿ.ತಮ್ಮಯ್ಯ ಬಿಜೆಪಿಗೆ ಗುಡ್ ಬೈ ಹೇಳಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷ ಸೇರ್ಪಡೆಯಾದ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿ.ಎಲ್.ಶಂಕರ್ ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು.
ಹೆಚ್.ಡಿ.ತಮ್ಮಯ್ಯ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿರುವುದು ಬಿಜೆಪಿ ಹಾಗು ಸಿ.ಟಿ ರವಿ ಅವರಿಗೆ ನುಂಗಲಾರದ ತುತ್ತಾಗಿದೆ. ಈ ಬಾರಿ ಸಿ.ಟಿ ರವಿ ಅವರ ರಾಜಕೀಯ ಭವಿಷ್ಯದ ಮೇಲೆ ಇದು ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.
ಇನ್ನು ಹೆಚ್ ಡಿ ತಮ್ಮಯ್ಯ ಚಿಕ್ಕಮಗಳೂರು ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮುಖಂಡರಾಗಿದ್ದು, ಚಿಕ್ಕಮಗಳೂರು ಕ್ಷೇತ್ರದಲ್ಲಿ 15 ಸಾವಿರ ಒಕ್ಕಲಿಗ ಮತವಿದ್ದು, 40 ಸಾವಿರಕ್ಕೂ ಹೆಚ್ಚು ಲಿಂಗಾಯತ ಸಮುದಾಯ ಮತಗಳಿವೆ. ತಮ್ಮಯ್ಯ ಕಾಂಗ್ರೆಸ್ ಸೇರ್ಪಡೆಯಿಂದ ಬಿಜೆಪಿ ಪಾಲಿನ ಲಿಂಗಾಯತ ಮತ ಒಡೆಯುವ ಸಾಧ್ಯತೆಯಿದ್ದು, ಇದು ಬಿಜೆಪಿಯ ಗೆಲುವಿನ ಮೇಲೆ ಪರಿಣಾಮ ಬೀರಲಿದೆ ಎಂದೇ ಹೇಳಲಾಗುತ್ತಿದೆ.
ಚಿಕ್ಕಮಗಳೂರಿನಲ್ಲಿ ಕಳೆದ 20 ವರ್ಷಗಳಿಂದ ಸಿ.ಟಿ.ರವಿ 4 ಬಾರಿ ಶಾಸಕರಾಗಿದ್ದು, ಈ ಭಾಗದಲ್ಲಿ ಅವರಿಗೆ ಎದುರಾಳಿಯೆ ಇಲ್ಲದಂತಾಗಿತ್ತು. 15 ವರ್ಷಗಳಿಂದ ಸಿ.ಟಿ.ರವಿಯ ಜೊತೆಗೆ ಇರುವ ತಮ್ಮಯ್ಯ ಕಾಂಗ್ರೆಸ್ ಸೇರಿದ್ದು, ಸಿ.ಟಿ.ರವಿ ವಿರುದ್ಧವೇ ಕಾಂಗ್ರೇಸಿನಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ಇದು ಸಿ.ಟಿ.ರವಿ ಅವರಿಗೆ ಕಸಿವಿಸಿ ಉಂಟು ಮಾಡಿದ್ದು, ಈ ಬಾರಿಯ ಚುನಾವಣಾ ಕಣ ಮತ್ತಷ್ಟು ರಂಗೇರಲಿದೆ.