ಕಡಬ ಸರ್ಕಾರಿ ಕಾಲೇಜು ಆವರಣದಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ; ಆರೋಪಿ ಬಂಧನ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಸರ್ಕಾರಿ ಕಾಲೇಜು ಆವರಣದಲ್ಲಿ ಸೋಮವಾರ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆದಿದೆ.
ಕಿರಾತಕನೋರ್ವ ಮೂವರು ವಿದ್ಯಾರ್ಥಿನಿಯರ ಮೇಲೆ ಕಾಲೇಜು ಪಕ್ಕ ಆ್ಯಸಿಡ್ ಹಾಕಿ ಪರಾರಿಯಾಗಿದ್ದಾನೆ. ಕಡಬದ ಸರ್ಕಾರಿ ಕಾಲೇಜು ಆವರಣದಲ್ಲಿ ಈ ಪೈಶಾಚಿಕ ಕೃತ್ಯ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೂವರು ವಿದ್ಯಾರ್ಥಿನಿಯರ ಮುಖಕ್ಕೆ ಗಂಭೀರ ಗಾಯಗಳಾಗಿದ್ದು ಅವರಲ್ಲಿ ಓರ್ವ ವಿದ್ಯಾರ್ಥಿನಿ ಸ್ಥಿತಿ ಚಿಂತಾಜನಕವಾಗಿದೆ ಎಂದು ಪ್ರಾರ್ಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಆರೋಪಿಯನ್ನು ಕೇರಳದ ಮಲಪ್ಪುರಂ ನ ಅಬಿನ್ (23) ಎಂದು ಗುರುತಿಸಲಾಗಿದೆ. ಈತ ಶಾಲಾ ವರಾಂಡದಲ್ಲಿ ಪರೀಕ್ಷಾ ತಯಾರಿ ನಡೆಸುತ್ತಿದ್ದ ಸೈನ್ಸ್ ವಿಭಾಗದ ವಿದ್ಯಾರ್ಥಿನಿಯ ಮೇಲೆ ಆ್ಯಸಿಡ್ ಎರಚಿದ್ದಾನೆ. ಈ ವೇಳೆ ಆಕೆಯ ಸಮೀಪ ಇದ್ದ ಇನ್ನಿಬ್ಬರು ವಿದ್ಯಾರ್ಥಿನಿಯರಿಗೂ ಆ್ಯಸಿಡ್ ತಗುಲಿದೆ ಎಂದು ತಿಳಿದು ಬಂದಿದೆ.
ಆರೋಪಿಯ ತಾಯಿಯ ಮನೆ ಹಾಗೂ ಸಂತ್ರಸ್ತ ವಿದ್ಯಾರ್ಥಿನಿಯ ಮನೆ ಅಕ್ಕಪಕ್ಕದಲ್ಲಿದ್ದು, ಆರೋಪಿಯು ತನ್ನ ತಾಯಿಯ ಮನೆಗೆ ಹೋದ ಸಂದರ್ಭ ವಿದ್ಯಾರ್ಥಿನಿಯ ಪರಿಚಯವಾಗಿತ್ತು ಎನ್ನಲಾಗಿದೆ.
ಆರೋಪಿ ಮಾಸ್ಕ್, ಹ್ಯಾಟ್ ಹಾಕಿಕೊಂಡು ಬಂದು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ. ಈತ ಎಂಬಿಎ ವ್ಯಾಸಂಗ ಮಾಡುತ್ತಿದ್ದ. ಅಲೀನಾ ಸಿಬಿ ಎಂಬ ವಿದ್ಯಾರ್ಥಿನಿಯನ್ನ ಟಾರ್ಗೆಟ್ ಮಾಡಿ ಈತ ದಾಳಿ ನಡೆಸಿದ್ದಾನೆ. ಪರಿಣಾಮ ಆಕೆಯ ಗೆಳತಿಯರಿಗೂ ಗಂಭೀರ ಗಾಯವಾಗಿದೆ.
ಸದ್ಯ ಗಾಯಗೊಂಡ ವಿದ್ಯಾರ್ಥಿನಿಯರಿಗೆ ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗುತ್ತಿದೆ.
ಸಂತ್ರಸ್ತ ವಿದ್ಯಾರ್ಥಿನಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಆರೋಪಿ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿರಬಹುದು ಎಂದು ಘಟನೆ ನಡೆದ ಕಡಬ ಸರಕಾರಿ ಕಾಲೇಜಿಗೆ ಭೇಟಿ ನೀಡಿದ ದಕ್ಷಿಣ ಕನ್ನಡ ಜಿಲ್ಲೆ ಎಸ್ಪಿ ಸಿ.ಬಿ.ರೈಶ್ಯಂತ್ ಹೇಳಿದ್ದಾರೆ.