ಅನಂತಕುಮಾರ್ ಹೆಗಡೆ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ; ಹೇಳಿಕೆಯ ವಿರುದ್ಧ ಪಕ್ಷ ಕ್ರಮಕೈಗೊಳ್ಳಲಿದೆ: ಅಶೋಕ್
ನವದೆಹಲಿ: ಸಂವಿಧಾನ ಬದಲಾವಣೆ ವಿಚಾರವಾಗಿ ಬಿಜೆಪಿಯ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ನೀಡಿರುವ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಕರ್ನಾಟಕ ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಬದಲಿಸುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ. ನಾವು ಸಂವಿಧಾನವನ್ನು ಗೌರವಿಸುತ್ತೇವೆ. ಅನಂತಕುಮಾರ್ ಹೆಗಡೆ ನೀಡಿರುವುದು ಅವರ ವೈಯಕ್ತಿಕ ಹೇಳಿಕೆ. ಅವರ ವಿರುದ್ಧ ಪಕ್ಷ ಕ್ರಮಕೈಗೊಳ್ಳಲಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಸೃಷ್ಟಿಯಾಗಿರುವ ಬಗ್ಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ನೀರು ಹರಿಸಿ ಕೆಆರ್‌ಎಸ್ ಬರಿದು ಮಾಡಿದೆ. ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಪಕ್ಷ ಆಡಳಿತದಲ್ಲಿದೆ ಎಂಬ ಕಾರಣಕ್ಕೆ ತಮಿಳುನಾಡಿಗೆ ಬೇಕಾಬಿಟ್ಟಿ ನೀರು ಹರಿಸಿದ್ದಾರೆ. ಇದರಿಂದ ಈಗ ಬೆಂಗಳೂರಿನಲ್ಲಿ ನೀರಿನ ಕೊರತೆ ಸೃಷ್ಟಿಯಾಗಿದೆ. ನೀರಿನ ಕೊರತೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕೊರತೆ ಇಲ್ಲ ಎನ್ನುವುದಾದರೆ ಹೆಚ್ಚು ನೀರು ಪಂಪ್ ಮಾಡಲಿ. ನೀರು ಇದ್ದರೆ ಬೆಂಗಳೂರಿಗೆ ನೀರು ಕೊಡಿ ಎಂದು ಸವಾಲೆಸೆದರು.
ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅಶೋಕ್, ಕೇಂದ್ರದ ನಾಯಕರು ನಮ್ಮ ಎಲ್ಲರ ಅಭಿಪ್ರಾಯ ಪಡೆದಿದ್ದಾರೆ. ಮೋದಿ ಅವರು ಸಭೆಯಲ್ಲಿದ್ದ ಕಾರಣ ಇದು ಅಂತಿಮ ಸಭೆ ನಡೆಯಲಿದೆ. 28 ಕ್ಷೇತ್ರಗಳ ಬಗ್ಗೆಯೂ ಚರ್ಚೆಯಾಗಿದೆ. ಯಾವ ಹಂತದಲ್ಲಿ ಎಷ್ಟು ಅಭ್ಯರ್ಥಿಗಳ ಘೋಷಣೆ ಮಾಡುತ್ತಾರೆ ಎಂಬುದು ಗೊತ್ತಿಲ್ಲ. ಕೆಲವು ಸಂಸದರು ನಿವೃತ್ತಿ ಘೋಷಿಸಿದ್ದಾರೆ. ಸಹಜವಾಗಿ ಬದಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದರು.
ಮೈಸೂರು ಕೊಡು ಸಂಸದ ಪ್ರತಾಪ್ ಸಿಂಹ, ಉತ್ತರ ಕನ್ನಡದ ಅನಂತಕುಮಾರ್ ಹೆಗಡೆ ಬಗ್ಗೆ ಚರ್ಚೆಯಾಗಿದೆ. ನಾಲ್ಕು ಗೋಡೆಗಳ ನಡುವೆ ನಡೆದ ಚರ್ಚೆಯನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ. ಹಾಲಿ ಸಂಸದರು ವಿಶ್ವಾಸ ಕಳೆದುಕೊಳ್ಳುವುದು ಬೇಡ. ಕೊನೆಯ ಕ್ಷಣವರೆಗೂ ಏನು ಬೇಕಾದರೂ ಆಗಬಹುದು ಎಂದು ಹೇಳಿದರು.
ನಾನು ಯುದುವೀರ್ ಅವರನ್ನು ಸಂಪರ್ಕಿಸಿಲ್ಲ. ಅವರ ಸ್ಪರ್ಧೆ ಬಗ್ಗೆ ಗೊತ್ತಿಲ್ಲ, ಬೇರೆ ಯಾರು ಸಂಪರ್ಕ ಮಾಡಿದ್ದಾರೆಯೋ ಗೊತ್ತಿಲ್ಲ ಎಂದು ಅಶೋಕ್ ಹೇಳಿದರು.