
ಉಚ್ಚಿಲ ದಸರಾದಲ್ಲಿ ತಾಸೆ ಪೆಟ್ಟಿಗೆ ಕುಣಿದ ಹೆಣ್ಣು ಹುಲಿಗಳು! ಇಡೀ ಜಗತ್ತೇ ಉಚ್ಚಿಲದ ಕಡೆ ನೋಡುವಂತೆ ಮಾಡಿದ ಹೆಣ್ಣು ಮಕ್ಕಳ ಹುಲಿ ಕುಣಿತ: ಜಯ ಸಿ.ಕೋಟ್ಯಾನ್
ಉಚ್ಚಿಲ: ದ.ಕ. ಮೊಗವೀರ ಮಹಾಜನ ಸಂಘದ ಅಧೀನದಲ್ಲಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ 'ಉಡುಪಿ-ಉಚ್ಚಿಲ ದಸರಾ'ದಲ್ಲಿ ರವಿವಾರ ಸಂಜೆ ಹೆಣ್ಣು ಮಕ್ಕಳ ಹುಲಿ ಕುಣಿತ ಸ್ಪರ್ಧೆ ಆಯೋಜಿಸಲಾಗಿತ್ತು. ಹೆಣ್ಣು ಮಕ್ಕಳ ಹುಲಿ ನೃತ್ಯ ಸ್ಪರ್ಧೆಯಲ್ಲಿ ತಾಸೆ ಡೋಲು ಅಬ್ಬರಕ್ಕೆ ಹೆಣ್ಣು ಮಕ್ಕಳು ಹೆಜ್ಜೆ ಹಾಕುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಮಹಾಲಕ್ಷ್ಮಿ ಸಹಕಾರಿ ಬ್ಯಾಂಕಿನವರು ಆಯೋಜಿಸಿದ್ದ ಈ ಹೆಣ್ಣು ಮಕ್ಕಳ ಹುಲಿ ಕುಣಿತ ಸ್ಪರ್ಧೆ ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನಿನ ಪ್ರವರ್ತಕರಾದ ಆನಂದ್ ಸಿ.ಕುಂದರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ವೇಳೆ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಮಾತನಾಡಿ, ಕಳೆದ 2 ವರ್ಷಗಳಿಂದ ಮಾಡುತ್ತಾ ಬಂದಿರುವ ಉಚ್ಚಿಲ ದಸರಾ ಈ ಬಾರಿಯೂ ಯಶಸ್ಸಿನ ಹೆಜ್ಜೆಯಿಡುತ್ತಿದೆ. ಕಳೆದ ಬಾರಿ ಹೆಣ್ಣು ಮಕ್ಕಳ ಹುಲಿ ಕುಣಿತ ಸ್ಪರ್ಧೆ ಮಾಡಿ ಇಡೀ ಜಗತ್ತೇ ಉಚ್ಚಿಲದ ಕಡೆ ನೋಡುವಂತೆ ಮಾಡಿದ ಈ ಕಾರ್ಯಕ್ರಮ ಮತ್ತೆ ಆಯೋಜಿಸಲಾಗಿರುವುದು ಸಂತಸದ ವಿಷಯ ಎಂದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಉಚ್ಚಿಲ ದಸರಾ ರೂವಾರಿ ಜಿ. ಶಂಕರ್, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಉಷಾ ರಾಣಿ, ರಾಮಚಂದ್ರ ಕುಂದರ್, ದಯಾನಂದ ಸುವರ್ಣ, ತುಳು ಸಿನೆಮಾ ನಟ ಅರ್ಜುನ್ ಕಾಪಿಕಾಡ್, ಸುಷ್ಮಾರಾಜ್ ಕಾಡಬೆಟ್ಟು, ಮೀನಾಕ್ಷಿ ಅಡ್ಯಂತಾಯ, ಬ್ಯಾಂಕ್ ಉಪಾಧ್ಯಕ್ಷ ವಾಸುದೇವ ಸಾಲ್ಯಾನ್, ಆಡಳಿತ ನಿರ್ದೇಶಕ ಶರತ್ ಕುಮಾರ್, ಎಜಿಎಂ ಶಾರಿಕಾ ಕಿರಣ್, ತೀರ್ಪುಗಾರರಾದ ಕೆ.ಕೆ. ಪೇಜಾವರ, ರಮೇಶ್ ಕಿದಿಯೂರು, ಶೇಖರ್ ಕಲಾ ಪ್ರತಿಭಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
14 ತಂಡಗಳು, ವೈಯಕ್ತಿಕ ವಿಭಾಗದಲ್ಲಿ 36 ಸ್ಪರ್ಧಿಗಳು ಭಾಗವಹಿಸಿದ್ದರು. 5 ವರ್ಷ ವಯಸ್ಸಿನವರಿಂದ 60 ವರ್ಷದ ಮಹಿಳೆಯರು ಹುಲಿ ಹೆಜ್ಜೆ ಹಾಕಿದರು. ತಂಡ ವಿಭಾಗದಲ್ಲಿ ಡಿ.ಡಿ. ಗ್ರೂಪ್ ನಿಟ್ಟೂರು ಪ್ರಥಮ ಸ್ಥಾನ ಪಡೆದು, ₹25 ಸಾವಿರ ನಗದು ಬಹುಮಾನ, ಟೈಗರ್ ಫ್ರೆಂಡ್ಸ್ ಕೊರಂಗ್ರಪಾಡಿ ತಂಡ ದ್ವಿತೀಯ ಸ್ಥಾನ ಪಡೆದು ₹20 ಸಾವಿರ, ಫಂಡರಿನಾಥ ಕೋಟೆ ಕಟಪಾಡಿ ತಂಡ ತೃತೀಯ ಸ್ಥಾನ ಗಳಿಸಿ ₹15 ಸಾವಿರನಗದು ಬಹುಮಾನ ಗೆದ್ದವು. ಎಲ್ಲಾ ತಂಡಗಳಿಗೆ ಸ್ಮರಣಿಕೆ ನೀಡಿ ಗೌರವಿಲಾಯಿತು. ವೈಯಕ್ತಿಕ ವಿಭಾಗದಲ್ಲಿ ರಮ್ಯಾ ರೂಪೇಶ್ ಪ್ರಥಮ (₹6 ಸಾವಿರ), ಸೌಮ್ಯ ಸುರೇಂದ್ರ ದ್ವಿತೀಯ (₹4 ಸಾವಿರ), ಕೃತಿ ವಿ. ಅಮೀನ್ ತೃತೀಯ (₹3 ಸಾವಿರ) ಸ್ಥಾನ ಪಡೆದರು.