ಉಚ್ಚಿಲ ಬಗ್ಗತೋಟದ ಮಿಲಾದುನ್ನಭಿ ಕಾರ್ಯಕ್ರಮದಲ್ಲಿ ಜಲ್ಲಾಲುದ್ದಿನ್, ಹಮೀದ್ NH, ಆರಿಫ್ ಖಾಸಿಂಗೆ ಸನ್ಮಾನ

ಉಚ್ಚಿಲ: ಇಲ್ಲಿನ ಬಗ್ಗತೋಟದ ಅಸ್ಲಾಸುಲ್ ಇಸ್ಲಾಂ ಅರೇಬಿಕ್ ಮದ್ರಸದಲ್ಲಿ ರವಿವಾರ ನಡೆದ ಮಕ್ಕಳ ಮಿಲಾದುನ್ನಭಿ ಕಾರ್ಯಕ್ರಮದಲ್ಲಿ ಉಚ್ಚಿಲದ ಸಾಮಾಜಿಕ ಕಾರ್ಯಕರ್ತ ಜಲ್ಲಾಲುದ್ದಿನ್ ಜಲ್ಲು, SDPI ಮೂಳೂರು ಆಂಬುಲೆನ್ಸ್  ಚಾಲಕರಾದ ಹಮೀದ್ NH ಹಾಗು ಎಂಜಿನಿಯರ್ ಆರಿಫ್ ಖಾಸಿಂ ಅವರನ್ನು ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಇತ್ತೀಚಿಗೆ ನಡೆದ ಬಡಾ ಎರ್ಮಾಳ್ ಮೀನುಗಾರ ಪ್ರಾಥಮಿಕ ಸಹಕಾರಿ ಸಂಘದ ವಾರ್ಷಿಕ ಮಹಾ ಸಭೆಯಲ್ಲಿಯೂ ಜಲ್ಲಾಲುದ್ದಿನ್ ಜಲ್ಲು ಅವರನ್ನು ಅಪಘಾತದ ವೇಳೆ ಅವರು ನೀಡುತ್ತಿರುವ ಸಾಮಾಜಿಕ ಸೇವೆ, ಕಳಕಳಿಯನ್ನು ಗುರುತಿಸಿ ಸನ್ಮಾನಿಸಲಾಗಿತ್ತು. 

ಉಚ್ಚಿಲ, ಪಡುಬಿದ್ರೆ, ಕಾಪು ಸುತ್ತಮುತ್ತ ಸಂಭವಿಸುವ ಅಪಘಾತ, ಇನ್ನಿತರ ಅನಾಹುತಗಳ ವೇಳೆ ಸ್ಥಳಕ್ಕೆ ದೌಡಾಯಿಸಿ ತಮ್ಮ ಜೀವದ ಹಂಗು ತೊರೆದು ಗಾಯಾಳುಗಳ ರಕ್ಷಣೆಗೆ ತೊಡಗುವ ಮೂಲಕ ಜಲ್ಲಾಲುದ್ದಿನ್ ಅವರು ಜೀವ ರಕ್ಷಕರಾಗಿ, ಸಾಮಾಜಿಕ ಬದ್ಧತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. 

SDPI ಮೂಳೂರು ಆಂಬುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಹಮೀದ್ NH ಅವರು, ಎಲ್ಲಿ ಏನೇ ಅನಾಹುತ, ಅಪಘಾತ ಸಂಭವಿಸಿದ ಕೂಡಲೇ ಸ್ಥಳಕ್ಕೆ ಆಂಬುಲೆನ್ಸ್ ಮೂಲಕ ಬಂದು ಜನರ ಜೀವ ರಕ್ಷಿಸುವಲ್ಲಿ ಮಾನವೀಯತೆ ಮೆರೆಯುತ್ತಿದ್ದಾರೆ. ಇನ್ನೋರ್ವ ಎಂಜಿನಿಯರ್ ಆರಿಫ್ ಖಾಸಿಂ ಅವರು ಸಾಮಾಜಿಕ ಸೇವೆ ನೀಡುತ್ತಾ ಬಂದಿದ್ದು, ಅವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಈ ವೇಳೆ ವೇದಿಕೆಯಲ್ಲಿ ಅಸ್ಲಾಸುಲ್ ಇಸ್ಲಾಂ ಅರೇಬಿಕ್ ಮದ್ರಸದ ಅಧ್ಯಕ್ಷ ಅಹ್ಮದ್ ಗುಲಾಂ, ಕಾರ್ಯದರ್ಶಿ ಬಶೀರ್ ಸುಲೈಮಾನ್, ಜೊತೆ ಕಾರ್ಯದರ್ಶಿ ಬಶೀರ್ ಅಬ್ದುಲ್ಲಾ, ಬಾಯ್ಸ್ ಬಗ್ಗತೋಟದ ಅಧ್ಯಕ್ಷ ತೌಫೀಕ್, ಕಾರ್ಯದರ್ಶಿ ಜುನೈದ್ ಉಚ್ಚಿಲ, ಜೊತೆ ಕಾರ್ಯದರ್ಶಿ ಜುಬೈರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.