'ಉಡುಪಿ ಉಚ್ಚಿಲ ದಸರಾ'ದಲ್ಲಿ ಕಣ್ಮನ ಸೆಳೆಯುತ್ತಿರುವ ಸಾಂಪ್ರದಾಯಿಕ ವಸ್ತು ಪ್ರದರ್ಶನ; ಜನರನ್ನು ಕೈಬೀಸಿ ಕರೆಯುತ್ತಿದೆ ಇಲ್ಲಿನ ವಸ್ತು-ಕಲಾಕೃತಿಗಳು
ಉಚ್ಚಿಲ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ವೈಭವಪೂರಿತ 'ಉಡುಪಿ ಉಚ್ಚಿಲ ದಸರಾ'ದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ವಸ್ತು ಪ್ರದರ್ಶನ ಜನರ ಕಣ್ಮನ ಸೆಳೆಯುತ್ತಿದೆ.
ನಾಡೋಜ ಜಿ.ಶಂಕರ್ ಅವರ ಮಾರ್ಗದರ್ಶನದಲ್ಲಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಸುವರ್ಣ ಬೆಳ್ಳಂಪಳ್ಳಿ ನೇತೃತ್ವದಲ್ಲಿ ಅ.2ರವರೆಗೆ ನಡೆಯಲಿರುವ 'ಉಡುಪಿ ಉಚ್ಚಿಲ ದಸರಾ' ಈ ಬಾರಿ ವಿಭಿನ್ನತೆಯಿಂದ ಕೂಡಿದೆ.
ಒಂದೆಡೆ ಶ್ರೀ ಕ್ಷೇತ್ರದ ಶ್ರೀಮತಿ ಶಾಲಿನಿ ಡಾ.ಜಿ.ಶಂಕರ್ ಭವ್ಯ ಸಭಾಂಗಣದಲ್ಲಿ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದರ ಮೇಲೊಂದರಂತೆ ನಡೆಯುತ್ತಿದ್ದರೆ, ಇನ್ನೊಂದೆಡೆ ಸಾಂಪ್ರದಾಯಿಕ ವಸ್ತು ಪ್ರದರ್ಶನ ಈಗ ಎಲ್ಲರ ಕೇಂದ್ರ ಬಿಂದುವಾಗಿದೆ.
ಈ 4ನೇ ವರ್ಷದ ದಸರಾ ಮಹೋತ್ಸವವು ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀಕ್ಷೇತ್ರ ಉಚ್ಚಿಲ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಬಹಳಷ್ಟು ವಿಜೃಂಭಣೆಯಿಂದ ನಡೆಯುತ್ತಿದ್ದು, ದೇವರ ದರ್ಶನದ ಜೊತೆಗೆ ಇಲ್ಲಿನ ವಿವಿಧ ಕಾರ್ಯಕ್ರಮ, ವಸ್ತು ಪ್ರದರ್ಶನ ಮುಂತಾದವುಗಳನ್ನು ನೋಡಿ ಕಣ್ತುಂಬಿಸಿಕೊಳ್ಳಲು ರಾಜ್ಯದ ಮೂಲೆಮೂಲೆಗಳಿಂದ ಜನರು ಬರುತ್ತಿದ್ದಾರೆ.
ಸಮುದ್ರದ ಜೀವಂತ ಮೀನುಗಳು ಇಲ್ಲಿವೆ....
ಎಲ್ಲಿಯೂ ಕಾಣಲು ಸಿಗದಂಥ ಸಮುದ್ರದ ಜೀವಂತ ಮೀನು ಹಾಗೂ ಹೊಳೆ ಮೀನುಗಳನ್ನು, ಅಲಂಕಾರಿಕ ಮೀನುಗಳನ್ನು ಇಲ್ಲಿನ ವಸ್ತುಪ್ರದರ್ಶನದಲ್ಲಿ ಕಾಣಬಹುದು. ಈ ಮೀನುಗಳನ್ನು ನೋಡಲು ಜನ ಮುಗಿಬೀಳುತ್ತಿದ್ದಾರೆ. ಜೊತೆಗೆ ಇಲ್ಲೊಂದು ವಿಶೇಷವಾಗಿ ತಯಾರಿಸಲಾದ ಅಕ್ವೇರಿಯಂನಲ್ಲಿದ್ದ ಪುಟಾಣಿ ಮತ್ಸ್ಯ ಕನ್ಯೆಯನ್ನು ಕಾಣಲು ಜನ ಬರುವಂತಾಗಿದೆ.
ಗುಡಿ ಕೈಗಾರಿಕಾ ಪ್ರಾತ್ಯಕ್ಷಿಕೆ, ಕುಬ್ಜ ಸಹೋದರರ ಕಲಾಕೃತಿ, ಜನಜಾಗೃತಿ ಕಲಾಕೃತಿ, ವಿಶೇಷ ಶಾಲೆಯ ಮಕ್ಕಳ ಕಲಾಕೃತಿ ಸೇರಿದಂತೆ ವಿವಿಧ ಪ್ರದರ್ಶನಗಳು ಜನರನ್ನು ಆಕರ್ಷಿಸುತ್ತಿದೆ.
ಮೆರಗು ತಂದ ಸೀರೆ ಮೇಳ....
ಈ ಬಾರಿ ವಿಶೇಷವಾಗಿ ಸೀರೆ ಮೇಳವನ್ನು ಆಯಾಜಿಸಲಾಗದ್ದು, ಇಲ್ಲಿ ನಾನಾ ಬಗೆಗಳ ಸೀರೆಗಳಿದ್ದು, ಮಾರಾಟ ಕೂಡ ನಡೆಯುತ್ತಿದೆ. ಮಹಿಳೆಯರು ಇದರ ಸುತ್ತ ಜಮಾಯಿಸಿ, ಈ ಸೀರೆಗಳನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ.
ಜನರ ಆಕರ್ಷಣೆಯ ಮರಳು ಶಿಲ್ಪ ಕಲಾಕೃತಿ
6 ಅಡಿ ಎತ್ತರ 12 ಅಡಿ ಅಗಲವುಳ್ಳ ಶಾರದೆ ಮತ್ತು ಉಚ್ಚಿಲ ದಸರಾ ರೂವಾರಿ ಡಾ.ಜಿ.ಶಂಕರ್ ಭಾವಶಿಲ್ಪದೊಂದಿಗೆ ಉಡುಪಿ-ಉಚ್ಚಿಲ ದಸರಾ ಮೆರುಗು ಸಾರುವ ಬೃಹತ್ ಮರಳು ಶಿಲ್ಪ ಕಲಾಕೃತಿ ಜನರನ್ನು ಆಕರ್ಷಿಸುವಂತಿದೆ. ಇದನ್ನು ಉಡುಪಿ ಸ್ಯಾಂಡ್ ಥೀಂ ಕಲಾವಿದರಾದ ಹರೀಶ್ ಸಾಗಾ, ಸಂತೋಷ ಭಟ್ ಹಾಲಾಡಿ ಮತ್ತು ಉಜ್ವಲ್ ನಿಟ್ಟೆ ಅವರು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಪರಿಸರದಲ್ಲಿ ರಿತೇಶ್ ಕಿದಿಯೂರು ಸಹಕಾರದೊಂದಿಗೆ ರಚಿಸಿದ್ದು,ಅದು ಕಲಾರಸಿಕರ ಗಮನ ಸೆಳೆಯುತ್ತಿದೆ.
ವಿವಿಧ ಪಕ್ಷಿಗಳ ಕಲರವ....
ಈ ಬಾರಿ ವಿವಿಧ ಪಕ್ಷಿಗಳನ್ನು ಕೂಡ ವಸ್ತು ಪ್ರದರ್ಶನದಲ್ಲಿಡಲಾಗಿದೆ. ಪಾರಿವಾಳ, ಗಿಳಿ ಸೇರಿದಂತೆ ನಾನಾ ಬಗೆಯ ಪಕ್ಷಿಗಳಿ ಇಲ್ಲಿ ಕಾಣ ಸಿಗುತ್ತಿದ್ದು, ಪಕ್ಷಿ ಪ್ರಿಯರನ್ನು ಕೈಬೀಸಿ ಕರೆಯುವಂತಿದೆ.
ಗಣ ಸೆಳೆಯುವ ಎತ್ತಿನ ಗಾಣ....
ಎತ್ತಿನ ಗಾಣ ಸಹಿತ ಅಲೆ ಮನೆ ಕಬ್ಬಿಣ ಹಾಲು ತಯಾರಿಕೆಯ ಪ್ರಾತ್ಯಕ್ಷಿಕೆಯಂತೂ ಜನರನ್ನು ಗ್ರಾಮೀಣ ಪ್ರದೇಶದ ಸೊಬಗನ್ನು ನೆನಪಿಸುವಂತಿದೆ. ಕಳೆದ ಬಾರಿಯ ದಸರಾದಲ್ಲಿಯೂ ಇದು ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ಕಲಾವಿದರ ಅದ್ಭುತ ಕೈಚಳಕದಿಂದ ಮೂಡಿದ ಫಲಪುಷ್ಪ
ಇಲ್ಲಿನ ಫಲಪುಷ್ಪ ಪ್ರದರ್ಶನವಂತೂ ಆಕರ್ಷಣೀಯವಾಗಿದೆ. ವಿವಿಧ ಬಗೆಯ ಹೂವು, ಹಣ್ಣುಗಳಿಂದ ತಯಾರಿಸಲಾದ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಜೊತೆಗೆ ವಿವಿಧ ಬಗೆಯ ಪ್ರಾಣಿ-ಪಕ್ಷಿಗಳನ್ನು ಹೋಲುವ ಹೂವು, ಹಣ್ಣುಗಳಿಂದ ತಯಾರಿಸಿದ ಕಲಾಕೃತಿಗಳು ಪ್ರದರ್ಶನಕ್ಕೆ ಇನ್ನಷ್ಟು ಮೆರುಗು ತಂದುಕೊಟ್ಟಿದೆ.
ಮಕ್ಕಳನ್ನು ಸೆಳೆಯುವ ವಿವಿಧ ಅಮ್ಯೂಸ್ಮೆಂಟ್ ಪಾರ್ಕ್-ತಿಂಡಿ ತಿನಸುಗಳು
ಮಕ್ಕಳನ್ನು ರಂಜಿಸುವ ವಿವಿಧ ಅಮ್ಯೂಸ್ಮೆಂಟ್ ಪಾರ್ಕ್'ಗಳು, ಆಟೋಟ ಸಲಕರಣೆಗಳು, ಮನೋರಂಜನಾ ಮತ್ತು ವ್ಯಾಪಾರ ಮಳಿಗೆಗಳು, ತಿಂಡಿ ಪದಾರ್ಥಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಮಹಾಲಕ್ಷ್ಮೀ ದೇವಸ್ಥಾನದ ಸುತ್ತಲೂ ಅವಕಾಶ ಕಲ್ಪಿಸಲಾಗಿದ್ದು, ಉಚ್ಚಿಲ ದಸರಾಕ್ಕೆ ಜನಜಂಗುಳಿಯೇ ಸೇರುವಂತೆ ಮಾಡಿದೆ.











