ಪ್ರೇಯಸಿಯನ್ನು ನೋಡಲು ಬಂದ ಯುವಕನಿಗೆ ಥಳಿಸಿ ಹತ್ಯೆ; ವಿಷಯ ತಿಳಿದು ಕತ್ತು ಕೊಯ್ದುಕೊಂಡ ಪ್ರೇಯಸಿ

ಪ್ರೇಯಸಿಯನ್ನು ನೋಡಲು ಬಂದ ಯುವಕನಿಗೆ ಥಳಿಸಿ ಹತ್ಯೆ; ವಿಷಯ ತಿಳಿದು ಕತ್ತು ಕೊಯ್ದುಕೊಂಡ ಪ್ರೇಯಸಿ

ಲಕ್ನೋ: ತನ್ನ ಪ್ರೇಯಸಿಯನ್ನು ಆಕೆಯ ಮನೆಯವರು ಬಲವಂತವಾಗಿ ಮದುವೆ ಮಾಡುತ್ತಿದ್ದಾರೆಂದು ಸ್ಥಳಕ್ಕೆ ಧಾವಿಸಿದ ವ್ಯಕ್ತಿಯನ್ನು ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ರವಿ (35) ಹತ್ಯೆಯಾದ ವ್ಯಕ್ತಿ. ಆತನ ಪ್ರೇಯಸಿ ಮನಿಷಾಳಿಗೆ ಬಲವಂತವಾಗಿ ಮದುವೆ ಮಾಡಲಾಗುತ್ತಿದೆ ಎಂದು ತಿಳಿದು, ಆಕೆಯನ್ನು ಭೇಟಿಯಾಗಲು ಹೋಗಿದ್ದ. ಆದರೆ, ಹುಡುಗಿ ಮನೆಯವರು ಆತನನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. 

ಹುಡುಗಿ ಮನೆಯವರು ಮತ್ತು ಗ್ರಾಮಸ್ಥರು ಸೇರಿಕೊಂಡು ಹೊಡೆದಿದ್ದರಿಂದ ಗಂಭೀರ ಗಾಯಗೊಂಡ ರವಿ ಕುಡಿಯಲು ನೀರು ಕೇಳಿದ್ದಾನೆ. ಆದರೆ, ಯಾರು ಸಹ ನೀರು ಕೊಡಲಿಲ್ಲ. ನಂತರ ಆತ ಮೃತಪಟ್ಟಿದ್ದಾನೆ. ಅವನು ಸತ್ತ ನಂತರ ಹಲ್ಲೆ ನಡೆಸಿದವರಿಗೆ ಪರಿಸ್ಥಿತಿಯ ಗಂಭೀರತೆ ಅರಿವಾಗಿದೆ.

ಹುಡುಗಿಯ ಚಿಕ್ಕಪ್ಪ ಪಿಂಟು ಕೊಲೆ ಆರೋಪದಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ರವಿ ಮತ್ತು ಪಿಂಟು ಅವರನ್ನು ಮೌದಾಹದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಅಲ್ಲಿ ವೈದ್ಯರು ರವಿ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಚಿಕಿತ್ಸೆಗಾಗಿ ಪಿಂಟುನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ರವಿ ಮೃತಪಟ್ಟ ಸುದ್ದಿ ತಿಳಿದು ಪ್ರೇಯಸಿ ಮನಿಷಾ ಕೂಡ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಹುಡುಗಿ ಮತ್ತು ಆಕೆಯ ಚಿಕ್ಕಪ್ಪ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ಆಕೆಯನ್ನು ಮೌದಹಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. 

ಮೊದಲು ರವಿ ನಮ್ಮ ಮನೆಗೆ ಬಂದು ಕೋಪದಲ್ಲಿ ಕೂಗಾಡಿದ. ಬಾಗಿಲು ತೆರೆದಾಗ ನನ್ನ ಪತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ. ಇದು ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಸಿತು ಎಂದು ಗಂಭೀರ ಗಾಯಗೊಂಡಿರುವ ಪಿಂಟು ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪರ್ಚ್ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆದಿದ್ದು, ಒಬ್ಬ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬ ಗಾಯಗೊಂಡಿದ್ದಾನೆ ಎಂದು ಹಮೀರ್‌ಪುರದ ಪೊಲೀಸ್ ವರಿಷ್ಠಾಧಿಕಾರಿ ದೀಕ್ಷಾ ಶರ್ಮಾ ತಿಳಿಸಿದ್ದಾರೆ. ಹುಡುಗಿ ಕೂಡ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article