ಉಡುಪಿಯಲ್ಲಿ ಮನರೇಗಾ ಹಿಂತೆಗೆತ ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಉಡುಪಿ : ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಗ್ರಾಮೀಣ ಭಾಗದ ಬಡವರ ಬದುಕಿಗೆ ಆಸರೆಯಾಗಲು ಜಾರಿಗೆ ತಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(MANREGA) ಯನ್ನು ಕೇಂದ್ರ ಸರಕಾರ ಹಿಂಪಡೆದಿರುವುದನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಯಿತು.
ಮಣಿಪಾಲದ ಕಾಯಿನ್ ಸರ್ಕಲ್ ನಿಂದ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಯ ಕಚೇರಿಗೆ ಆಗಮಿಸಿದ ಪತ್ರಿಭಟನಾಕಾರರು. ಕೇಂದ್ರ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ ಕುಮಾರ್ ಸೊರಕೆ, ಬಡವರ ಪರವಾದ ಯೋಜನೆಗಳನ್ನು ಕೇಂದ್ರ ಸರಕಾರ ಬದಲಾವಣೆ ಮಾಡುವ ಮೂಲಕ ಬಡವರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಮನರೇಗಾ ಯೋಜನೆ ಉಳಿಸಲು ರೈತರ ಚಳವಳಿ ಮಾದರಿಯಲ್ಲಿ ಹೋರಾಟ ಮಾಡಬೇಕಾಗಿದೆ ಎಂದರು.
ಮಾಜಿ ಸಚಿವ ಜಯಪ್ರಕಾಶ್ ಹೆಗ್ದೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್, ಮುಖಂಡರುಗಳಾದ ಉದಯ್ ಕುಮಾರ್ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಕಾರ್ಯಧ್ಯಕ್ಷರಾದ ಕಿಶನ್ ಹೆಗ್ದೆ ಕೋಳ್ಕೆಬೈಲ್, ಕೆಪಿಸಿಸಿ ಮೈನಾರಿಟಿ ಕಮಿಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶೇಖ್ ವಾಹಿದ್ ದಾವೂದ್, ರಮೇಶ್ ಕಾಂಚನ್, ಮೊದಲಾದವರು ಭಾಗವಹಿಸಿದ್ದರು.





