ಬೀದರ್ ಜಿಲ್ಲಾಮಟ್ಟದ ಸಿರಿಧಾನ್ಯ, ಮತ್ಸ್ಯ, ಉದ್ಯೋಗ, ಪುಷ್ಪ ಮೇಳ ಹಾಗೂ ತೋಟಗಾರಿಕೆ ಮೇಳಕ್ಕೆ ಚಾಲನೆ ನೀಡಿದ ಸಚಿವ ಈಶ್ವರ್ ಖಂಡ್ರೆ
ಇಂದು ಬೀದರ ಜಿಲ್ಲಾಮಟ್ಟದ ಸಿರಿಧಾನ್ಯ ಮೇಳ, ಮತ್ಸ್ಯ ಮೇಳ, ಉದ್ಯೋಗ ಮೇಳ, ಪುಷ್ಪ ಮೇಳ ಹಾಗೂ ತೋಟಗಾರಿಕೆ ಮೇಳ–2026 ಅನ್ನು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಬಿ ಖಂಡ್ರೆಯವರು ಉದ್ಘಾಟಿಸಿದರು.
ಸಿರಿಧಾನ್ಯಗಳು ಕೇವಲ ಆಹಾರವಲ್ಲ, ಅವು ಆರೋಗ್ಯಪೂರ್ಣ ಜೀವನದ ಭದ್ರ ಆಧಾರ. ರಾಗಿ, ಜೋಳ, ಸಜ್ಜೆ, ನವಣೆ, ಊದಲು ಮುಂತಾದ ಸಿರಿಧಾನ್ಯಗಳಲ್ಲಿ ನಾರು (ಫೈಬರ್), ಕಬ್ಬಿಣ, ಕ್ಯಾಲ್ಸಿಯಂ, ಪ್ರೋಟೀನ್ ಹಾಗೂ ಅಗತ್ಯ ಖನಿಜಗಳು ಸಮೃದ್ಧವಾಗಿದ್ದು, ಮಧುಮೇಹ, ರಕ್ತದೊತ್ತಡ, ಸ್ಥೂಲತೆ ಮತ್ತು ಹೃದಯ ಸಂಬಂಧಿತ ಕಾಯಿಲೆಗಳ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಮಕ್ಕಳ ಪೋಷಣೆ, ಗರ್ಭಿಣಿಯರ ಆರೋಗ್ಯ ಮತ್ತು ವೃದ್ಧರ ಪೌಷ್ಟಿಕ ಅಗತ್ಯಗಳಿಗೆ ಸಿರಿಧಾನ್ಯಗಳು ಅತ್ಯುತ್ತಮ ಎಂದ ಈಶ್ವರ್ ಬಿ ಖಂಡ್ರೆಯವರು ಕಡಿಮೆ ನೀರಿನಲ್ಲಿ ಬೆಳೆಯುವ ಸಿರಿಧಾನ್ಯಗಳು ಹವಾಮಾನ ಬದಲಾವಣೆಯ ಸಂದರ್ಭದಲ್ಲಿಯೂ ರೈತರಿಗೆ ಭದ್ರ ಆದಾಯ ನೀಡುವ ಶಾಶ್ವತ ಬೆಳೆಗಳಾಗಿವೆ. ಆರೋಗ್ಯ ಮತ್ತು ಕೃಷಿ—ಎರಡನ್ನೂ ಒಟ್ಟಿಗೆ ರಕ್ಷಿಸುವ ಶಕ್ತಿ ಸಿರಿಧಾನ್ಯಗಳಲ್ಲಿ ಅಡಗಿದೆ. ಜನರು ತಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯಗಳನ್ನು ಅಳವಡಿಸಿಕೊಳ್ಳಬೇಕು; ರೈತರು ಮೌಲ್ಯವರ್ಧಿತ ಉತ್ಪನ್ನಗಳತ್ತ ಗಮನಹರಿಸಬೇಕು ಎಂದರು.
ಈ ಸಂದರ್ಭದಲ್ಲಿ ಮೇಳದಲ್ಲಿ ಸ್ಥಾಪಿಸಲಾದ ವಿವಿಧ ಇಲಾಖೆಗಳ ಹಾಗೂ ಖಾಸಗಿ ಸಂಸ್ಥೆಗಳ ಮಳಿಗೆಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿದ ಸಚಿವರು ರೈತರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಮತ್ತು ಯುವಕರೊಂದಿಗೆ ಸಂವಾದ ನಡೆಸಿ ಸಿರಿಧಾನ್ಯ ಆಧಾರಿತ ಆಹಾರ ಉತ್ಪನ್ನಗಳು, ತೋಟಗಾರಿಕೆ, ಮತ್ಸ್ಯೋದ್ಯಮ ಹಾಗೂ ಉದ್ಯೋಗಾವಕಾಶಗಳ ಕುರಿತು ಮಾಹಿತಿ ಪಡೆದುಕೊಂಡರು.
ರೈತರು, ಯುವಕರು ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣದ ದಿಕ್ಕಿನಲ್ಲಿ ಇಂತಹ ಮೇಳಗಳು ಬಹುಮುಖ್ಯವಾದವು ಎಂದು ರಾಜ್ಯ ಅರಣ್ಯ ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆಯ ಸಚಿವರೂ ಆಗಿರುವ ಖಂಡ್ರೆಯವರು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಸಚಿವ ರಹೀಮ್ ಖಾನ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮ ಸೇರಿದಂತೆ ಇತರ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.










