ಮಣಿಪಾಲ: ರೋಡ್ ರೋಲರ್ ಬಳಸಿ ಕರ್ಕಶ ಶಬ್ದ ಹೊರಡಿಸುವ ಮೊಡಿಫೈ ಸೈಲೆನ್ಸರ್ ಧ್ವಂಸ!
ಉಡುಪಿ: ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಕರ್ಕಶ ಶಬ್ದ ಹೊರಡಿಸುತ್ತಾ ಶಬ್ದ ಮಾಲಿನ್ಯ ಉಂಟು ಮಾಡುವ ದ್ವಿಚಕ್ರ ಸವಾರರ ವಿರುದ್ಧ ಮಣಿಪಾಲ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಅತಿಯಾದ ಶಬ್ದ ಉಂಟು ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ 120 ದ್ವಿಚಕ್ರ ವಾಹನಗಳ ಮೊಡಿಫೈ ಸೈಲೆನ್ಸರ್ ಗಳನ್ನು ಕಿತ್ತು, ಅದರ ಮೇಲೆ ರೋಡ್ ರೋಲರ್ ಚಲಾಯಿಸಿ ಧ್ವಂಸ ಮಾಡಲಾಯಿತು.
ಕಳೆದ 6 ತಿಂಗಳಿನಿಂದ ಮಣಿಪಾಲ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಠಾಣಾ ವ್ಯಾಪ್ತಿಯ ಆಯಾ ಸ್ಥಳಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಈ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 120 ಮೊಡಿಫೈ ಸೈಲೆನ್ಸರ್‌ಗಳನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣಗಳಿಂದ ಒಟ್ಟು 1,05,000 ದಂಡವನ್ನು ವಸೂಲಿ ಮಾಡಲಾಗಿದೆ..
ವಶಪಡಿಸಿಕೊಳ್ಳಲಾದ 120 ಮೊಡಿಫೈ ಸೈಲೆನ್ಸರ್‌ಗಳನ್ನು ಶನಿವಾರ ಜಿಲ್ಲಾ ಪೊಲೀಸ್ ಅಧಿಕ್ಷಕ ಹರಿರಾಮ್ ಶಂಕರ್ ಅವರ ಸಮಕ್ಷಮದಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಮುಂಭಾಗದಲ್ಲಿ ರೋಡ್ ರೋಲರ್ ಬಳಸಿ ನಾಶ ಪಡಿಸಲಾಯಿತು. ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಹಾಗೂ ಸಿಬ್ಬಂದಿ ಹಾಜರಿದ್ದರು.