ಚಿತ್ತಾಪೂರ; ಅಲ್ಲೂರು (ಬಿ) ಗ್ರಾಮದ 2877 ಎಕರೆ ಅರಣ್ಯ ಸಂರಕ್ಷಿತ ಮೀಸಲು: ವನ್ಯಜೀವಿ ಮಂಡಳಿ ಸಭೆ ನಿರ್ಧಾರ

ಬೆಂಗಳೂರು : ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಅಲ್ಲೂರು (ಬಿ) ಗ್ರಾಮದ 2877 ಎಕರೆ ಅರಣ್ಯವನ್ನು ಸಂರಕ್ಷಿತ ಮೀಸಲು ಎಂದು ಘೋಷಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಗುರುವಾರ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ವನ್ಯಜೀವಿ ಮಂಡಳಿಯ 6ನೆ ಸಭೆಯಲ್ಲಿ ನಿರ್ಧರಿಸಲಾಗಿದೆ.

ಬೆಟ್ಟ ಗುಡ್ಡಗಳಿಂದ ಕೂಡಿದ, ಹಚ್ಚಹಸಿರಿನ ರಮಣೀಯವಾದ ಈ ಅರಣ್ಯ ಪ್ರದೇಶ ಚಿರತೆ, ಕಾಡುಹಂದಿ, ಜಿಂಕೆ, ಕಾಡುಕುರಿ, ಕಾಡುಬೆಕ್ಕು, ಚಿಪ್ಪುಹಂದಿ, ನರಿ ಮೊದಲಾದ ವನ್ಯಜೀವಿಗಳ ಆವಾಸಸ್ಥಾನವಾಗಿದ್ದು, ಈ ಪ್ರದೇಶವನ್ನು ಸಂರಕ್ಷಿತ ಮೀಸಲು ಎಂದು ಘೋಷಿಸಲು ಯೋಗ್ಯವಾಗಿದೆ ಎಂದು ಸಭೆ ತೀರ್ಮಾನಿಸಿತು.

ಇದಕ್ಕೂ ಮುನ್ನ ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಕಲಂ 36 ಎ ರೀತ್ಯ ಸ್ಥಳೀಯ ಗ್ರಾಮಪಂಚಾಯತಿಯ ವಿಶೇಷ ಗ್ರಾಮಸಭೆಯಲ್ಲಿಯೂ ಈ ಬಗ್ಗೆ ಚರ್ಚಿಸಿ, ಸಂರಕ್ಷಿತ ಮೀಸಲು ಎಂದು ಘೋಷಿಸಲು ಸಮ್ಮತಿ ಪಡೆಯಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.

ಉಳಿದಂತೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪರಿಸರ ಸೂಕ್ಷ್ಮ ವಲಯದಲ್ಲಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ವತಿಯಿಂದ ಹಂತ1 ಪದವಿ ಕಾಲೇಜು ಆವರಣ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.