ಯೋಗೀಶ್‌ ಗೌಡ ಕೊಲೆ ಪ್ರಕರಣ; ವಿನಯ್‌ ಕುಲಕರ್ಣಿ ಸೇರಿದಂತೆ 17 ಮಂದಿಯ ಶಿಕ್ಷೆ ಶುಕ್ರವಾರ ಪ್ರಕಟ

ಬೆಂಗಳೂರು : ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ದೋಷಿಗಳಾಗದ ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿ ಸೇರಿ 17 ಮಂದಿಯ ಶಿಕ್ಷೆ ಪ್ರಮಾಣವನ್ನು ಜನಪ್ರತಿನಿಧಿಗಳ ವಿಶೇಷ‌ ನ್ಯಾಯಾಲಯ ಶುಕ್ರವಾರ ಪ್ರಕಟಿಸಲಿದೆ.

ಯೋಗೀಶ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್‌ ಕುಲಕರ್ಣಿ ಸೇರಿ 17 ಮಂದಿಯನ್ನು ದೋಷಿಗಳೆಂದು ತೀರ್ಮಾನಿಸಿ‌ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಬುಧವಾರ ತೀರ್ಪು ನೀಡಿದ್ದರಲ್ಲದೆ, ಶಿಕ್ಷೆಯ ಪ್ರಮಾಣ ನಿಗದಿಪಡಿಸಲು ಪ್ರಕರಣದ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ್ದರು.

ಗುರುವಾರ ಸಿಬಿಐ ವಿಶೇಷ ಅಭಿಯೋಜಕ ಎಸ್.ವಿ‌ ರಾಜು ಹಾಜರಾಗಿ ಕೊಲೆಯಂಥ ಗಂಭೀರ ಅಪರಾಧ ಕೃತ್ಯವನ್ನು ಅಪರಾಧಿಗಳು ಎಸಗಿದ್ದಾರೆ. ಜತೆಗೆ, ತಮ್ಮ ಪ್ರಭಾವವನ್ನು ಬಳಸಿ ತನಿಖೆಯ ಹಾದಿ ತಪ್ಪಿಸಲು ಯತ್ನಿಸಿದ್ದಾರೆ. ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ನಾವು ಕೇಳುತ್ತಿಲ್ಲ. ಆದರೆ, ಆಜೀವ ಸೆರೆವಾಸದ ಶಿಕ್ಷೆ ವಿಧಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ವಿನಯ್‌ ಕುಲಕರ್ಣಿ ಪರ ಹಿರಿಯ ವಕೀಲ ಶ್ಯಾಮ್ ಸುಂದರ್ ವಾದ ಮಂಡಿಸಿ, ಮರಣದಂಡನೆಗೆ ಪರ್ಯಾಯವಾಗಿ ಯಾವುದೇ ಕ್ಷಮಾದಾನಕ್ಕೆ (Remission) ಅವಕಾಶವಿಲ್ಲದ ಆಜೀವ ಸೆರೆವಾಸದ ಶಿಕ್ಷೆ (ಸ್ವಾಭಾವಿಕವಾಗಿ ಮರಣ ಹೊಂದುವವರೆಗೆ) ವಿಧಿಸುವ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಾದ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳಿಗೆ ಮಾತ್ರ ಇದೆ. ಈ ಅಧಿಕಾರ ಸೆಷನ್ಸ್ ನ್ಯಾಯಾಲಯಗಳಿಗೆ ಇಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು‌ ನೀಡಿದೆ. ಇದೇ ತೀರ್ಪಿನ ಆಧಾರದಲ್ಲಿ ಹೈಕೋರ್ಟ್ ಸಹ ಕೊಲೆ ಅಪರಾಧಿಯೊಬ್ಬನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವನಪರ್ಯಂತ ಜೈಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಮಾರ್ಪಡಿಸಿದೆ ಎಂದು ಕೋರ್ಟ್ ಗಮನಕ್ಕೆ ತಂದರು.

ಎಲ್ಲ ಅಪರಾಧಿಗಳ ಪರ ವಕೀಲರ ವಾದ ಹಾಗೂ ಅಪರಾಧಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡ ನ್ಯಾಯಾಲಯ, ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿತು.