ಅನಿವಾಸಿ ಕನ್ನಡಿಗರಿಗಾಗಿ ಸಚಿವಾಲಯ ಸ್ಥಾಪನೆಗೆ ಗಲ್ಫ್ ರಿಟೈರೀಸ್ ಅಸೋಸಿಯೇಷನ್ ಸ್ವಾಗತ: ಸಚಿವಾಲಯದ ನೇತೃತ್ವವನ್ನು ಡಾ.ಆರತಿ ಕೃಷ್ಣರಿಗೆ ನೀಡುವಂತೆ ಒತ್ತಾಯ

ಮಂಗಳೂರು: ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿರುವುದನ್ನು ಗಲ್ಫ್ ರಿಟೈರೀಸ್ ಅಸೋಸಿಯೇಷನ್ (GRA) ಸ್ವಾಗತಿಸಿದೆ. 

ಈ ಸಚಿವಾಲಯದ ಸ್ಥಾಪನೆಯು ವಿಶ್ವದ ವಿವಿಧ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಹಲವು ವರ್ಷಗಳ ಕನಸಾಗಿದ್ದು, ಅವರ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಒದಗಿಸುವ ಮಹತ್ವದ ಹೆಜ್ಜೆಯಾಗಿದೆ. ಅನಿವಾಸಿ ಕನ್ನಡಿಗರ ಕಲ್ಯಾಣ ಮತ್ತು ಹಿತಾಸಕ್ತಿಗಾಗಿ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿರುವ ಡಾ.ಆರತಿ ಕೃಷ್ಣ ಅವರು ಈ ಮಹತ್ವದ ಹುದ್ದೆಗೆ ಅತ್ಯಂತ ಅರ್ಹ ಅಭ್ಯರ್ಥಿಯಾಗಿದ್ದಾರೆ ಎಂದು ಜಿಆರ್‌ಎ ಅಭಿಪ್ರಾಯಪಟ್ಟಿದೆ.

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕರ್ನಾಟಕ ಎನ್‌ಆರ್‌ಐ ಫೋರಂನ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದ ಡಾ.ಆರತಿ ಕೃಷ್ಣ ಅವರು ತಮ್ಮ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿ, ವಿದೇಶದಲ್ಲಿರುವ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಹಾಗೂ ಅವರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ.

ಆದ್ದರಿಂದ, ನೂತನ ಅನಿವಾಸಿ ಕನ್ನಡಿಗರ ಸಚಿವಾಲಯದ ನೇತೃತ್ವವನ್ನು ಡಾ. ಆರತಿ ಕೃಷ್ಣ ಅವರಿಗೆ ನೀಡುವ ಮೂಲಕ ಸರ್ಕಾರವು ಅನಿವಾಸಿ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಬೇಕೆಂದು ಗಲ್ಫ್ ರಿಟೈರೀಸ್ ಅಸೋಸಿಯೇಷನ್ ಆಗ್ರಹಿಸಿದೆ.