ಸಚಿವ ಈಶ್ವರ್ ಖಂಡ್ರೆಗೆ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳಿಂದ ಗೌರವ ವಂದನೆ-ಸನ್ಮಾನ

ಬೆಂಗಳೂರು: ಅರಣ್ಯ ಇಲಾಖೆಯ ವಿವಿಧ ವಿಭಾಗಗಳ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೆಂಗಳೂರಿನಲ್ಲಿ ಶನಿವಾರ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ ಆತ್ಮೀಯವಾಗಿ ಗೌರವವಂದನೆ ಸಲ್ಲಿಸಿ, ಸನ್ಮಾನಿಸಿದರು. 


ಅರಣ್ಯ, ಪ್ರಕೃತಿ ಮತ್ತು ಪರಿಸರ ಉಳಿದರೆ ಮಾತ್ರ ಮಾನವಕುಲದ ಭವಿಷ್ಯ ಸುರಕ್ಷಿತವಾಗಿರುತ್ತದೆ. ಹೀಗಾಗಿ ಅರಣ್ಯ ಸಂರಕ್ಷಣೆ, ವನ್ಯಜೀವಿ ರಕ್ಷಣೆ ಹಾಗೂ ಜೀವವೈವಿಧ್ಯ ಉಳಿಸುವ ಕಾರ್ಯದಲ್ಲಿ ತೊಡಗಿರುವ ಪ್ರತಿಯೊಬ್ಬ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಯ ಸೇವೆ ಅತ್ಯಂತ ಮಹತ್ವದ್ದಾಗಿದೆ ಎಂದು ಈಶ್ವರ್ ಖಂಡ್ರೆ ಈ ಸಂದರ್ಭದಲ್ಲಿ ಹೇಳಿದರು. 

ಅರಣ್ಯ ಸಚಿವನಾಗಿ ಕೆಲಸ ಮಾಡುವ ಅವಕಾಶ ಸಿಕ್ಕ ಅವಧಿಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಮನ್ವಯದಿಂದ ಕೆಲಸ ಮಾಡುವ ಅವಕಾಶ ದೊರೆತಿದ್ದು ನನಗೆ ಹೆಮ್ಮೆ. ಇಂದು ನಾನು ಅರಣ್ಯ ಸಚಿವನಾಗಿರದಿದ್ದರೂ ಸಹ ಇದೇ ಪ್ರೀತಿ, ಅಭಿಮಾನದಿಂದ ಭೇಟಿಯಾಗಿರುವ ನಿಮ್ಮೆಲ್ಲರ ಆತ್ಮೀಯತೆ ಹೃದಯ ತುಂಬಿಸಿದೆ.

ರಾಜ್ಯದ ಅರಣ್ಯ, ಹಸಿರುಹೊದಿಕೆ ಮತ್ತು ವನ್ಯಜೀವಿ ಸಂರಕ್ಷಣೆ ಇಂದು ಸಾಧ್ಯವಾಗಿರುವುದು ಮುಂಚೂಣಿ ಸಿಬ್ಬಂದಿ, ಅರಣ್ಯ ರಕ್ಷಕರು ಹಾಗೂ ಅಧಿಕಾರಿಗಳ ಹಗಲಿರುಳು ಶ್ರಮದ ಫಲ. ನಿಮ್ಮ ಪ್ರಾಮಾಣಿಕತೆ, ದಕ್ಷತೆ ಮತ್ತು ಕರ್ತವ್ಯನಿಷ್ಠೆ ಮುಂದಿನ ಪೀಳಿಗೆಗೆ ಸುರಕ್ಷಿತ ಪ್ರಕೃತಿಯನ್ನು ನೀಡುವಲ್ಲಿ ಮಹತ್ವದ ಪಾತ್ರವಹಿಸಲಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು. 

ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಕಾರ್ಯದಲ್ಲಿ ಯಾವುದೇ ತೊಡಕು ಎದುರಾದರೂ ಸರ್ಕಾರ ಸದಾ ನಿಮ್ಮ ಜೊತೆ ಇರುತ್ತದೆ. ಮಾಜಿ ಅರಣ್ಯ ಸಚಿವನಾಗಿ ನಾನೂ ಸಹ ಸದಾ ನಿಮ್ಮ ಪರ ನಿಲ್ಲುತ್ತೇನೆ.