ಬೆಂಗಳೂರು: ಕಾಂಗ್ರೆಸ್ ನಾಯಕ, ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೆಂಬಲಿಗರು, ಮುಸ್ಲಿಂ ಸಮುದಾಯದ ಮುಖಂಡರು ಸಿಡಿದೆದ್ದಿದ್ದಾರೆ. ಝಮೀರ್ ಅವರಿಗೆ ಸಚಿವ ಸ್ಥಾನ ನೀಡುವಂತೆ ರಾಜ್ಯಾದ್ಯಂತ ಒತ್ತಾಯ, ಧರಣಿಗಳು, ಕೂಗು ಕೇಳಿಬರುತ್ತಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಝಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಧರಣಿ ನಡೆಸಿದ್ದಾರೆ. ಈ ಬೆನ್ನಲ್ಲೇ ಝಮೀರ್ ಪರ ಸ್ವಾಮೀಜಿಯೊಬ್ಬರು ಬ್ಯಾಟ್ ಬೀಸಿದ್ದಾರೆ. ಝಮೀರ್ ಅಹ್ಮದ್ ಅವರು ಸಚಿವ ಅಲ್ಲ, ಉಪಮುಖ್ಯಮಂತ್ರಿ ಅಲ್ಲ ಅವರು ಸಿಎಂ ಹುದ್ದೆಗೆ ಅರ್ಹತೆ ಇರೋರು ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.
ಝಮೀರ್ ಅಹ್ಮದ್ ಖಾನ್ ಅವರಿಗೆ ಸಚಿವಸ್ಥಾನಕ್ಕಾಗಿ ಕೊಪ್ಪಳದ ಮಹೇಶ್ವರಾನಂದ ಸ್ವಾಮೀಜಿಯಿಂದ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಧರಣಿಯೊಂದರಲ್ಲಿ ಈ ವಿಚಾರವಾಗಿ ಮಾತನಾಡಿರುವ ಶ್ರೀಗಳು, ಇವತ್ತು ನಾವೆಲ್ಲಾ ಝಮೀರ್ ಅಹ್ಮದ್ ಖಾನ್ ಪವರ್ ತೋರಿಸುವುದಕ್ಕೆ ಬಂದಿದ್ದೇವೆ. ಬಂಜಾರ ಗುರುಪೀಠದ ಸ್ವಾಮೀಜಿಗಳು ಕೂಡ ಝಮೀರ್ ಬೆಂಬಲಕ್ಕಿದ್ದಾರೆ. ಝಮೀರ್ ಅವರು ಸಚಿವ ಅಲ್ಲ, ಉಪಮುಖ್ಯಮಂತ್ರಿ ಅಲ್ಲ, ಅವರು ಸಿಎಂ ಹುದ್ದೆಗೆ ಅರ್ಹತೆ ಇರೋರು, ರಾಜ್ಯದಲ್ಲಿ ಒಂದು ಕೋಟಿ 40 ಲಕ್ಷ ಮುಸ್ಲಿಮರು, 2 ಕೋಟಿ ದಲಿತರು ಇದ್ದಾರೆ, ಅವರು ಮುಸ್ಲಿಮರ ನಾಯಕ ಮಾತ್ರ ಅಲ್ಲ, ಅಹಿಂದ ವರ್ಗದ ನಾಯಕ ಎಂದು ಹೇಳಿದರು.
ಝಮೀರ್ ಅಹ್ಮದ್ ಅವರನ್ನು ಹೀಗೆ ಕಡೆಗಣಿಸುತ್ತಿರುವುದು ಬಹಳ ಅನ್ಯಾಯ, ಝಮೀರ್ ಅವರು ಕೇರಳದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದಕ್ಕೆ ಹಗಲು ರಾತ್ರಿ ದುಡಿದಿದ್ದಾರೆ. ಬಿ.ವೈ ರಾಘವೇಂದ್ರರನ್ನು ಗೆಲ್ಲಿಸಿಕೊಂಡು ಬನ್ನಿ ಅಂತ ದಿವಂಗತ ಶಾಮನೂರು ಶಿವಶಂಕರಪ್ಪ ಅವರು ಹೇಳಿದ್ದರು. ಅದು ಪಕ್ಷ ವಿರೋಧಿ ಕೆಲಸ ಆಗಲ್ವಾ? ಎಂದು ಮಹೇಶ್ವರಾನಂದ ಸ್ವಾಮೀಜಿ ಪ್ರಶ್ನೆ ಮಾಡಿದರು.
ಝಮೀರ್ ಅಹ್ಮದ್ ಖಾನ್ ಅವರು ಕೇವಲ ನಾಯಕ ಮಾತ್ರ ಅಲ್ಲ ಅವರೊಂದು ಪವರ್, ಮುಸ್ಲಿಮರು ಯಾವುದೇ ಪಕ್ಷದ ಗುಲಾಮರಲ್ಲ ಅವರು ಪೈಗಂಬರರ ಅನುಯಾಯಿಗಳು, ಅದನ್ನು ಕಾಂಗ್ರೆಸ್ ಪಕ್ಷ ಅರ್ಥ ಮಾಡಿಕೊಳ್ಳಬೇಕು, ಕೂಡಲೇ ಕಾಂಗ್ರೆಸ್ ಹೈಕಮಾಂಡ್ ಝಮೀರ್ ಅವರನ್ನು ಕರೆಸಿ ಅವರು ಕೇಳುವ ಸ್ಥಾನಮಾನ ಕೊಡಬೇಕು, ಇಲ್ಲದೆ ಹೋದರೆ 2028ರ ಚುನಾವಣೆಯಲ್ಲಿ ಇದರ ಎಫೆಕ್ಟ್ ಕಾಂಗ್ರೆಸ್ ಎದುರಿಸಬೇಕಾಗುತ್ತದೆ ಎಂದು ಮಹೇಶ್ವರಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಮುಸ್ಲಿಮರ ಮಾಸ್ ಲೀಡರ್ ಬೆನ್ನಿಗೆ ಚೂರಿ ಹಾಕಿದೆ
ಝಮೀರ್ ಅಹಮ್ಮದ್‌ಗೆ ಮೊದಲ ಹಂತದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಝಮೀರ್ ಅಹ್ಮದ್ ಖಾನ್ ಬೆಂಬಲಿಗರು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಬೆಂಬಲಿಗರು ಕಾಂಗ್ರೆಸ್ ಹೈ ಕಮಾಂಡ್ ಮುಸ್ಲಿಮರ ಮಾಸ್ ಲೀಡರ್ ಬೆನ್ನಿಗೆ ಚೂರಿ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು
ನಮ್ಮ ನಾಯಕನಿಗೆ ನ್ಯಾಯ ಒದಗಿಸಬೇಕು, ಮುಸ್ಲಿಮರ ಜನಸಂಖ್ಯೆ ಎಷ್ಟಿದೆ ರಾಜ್ಯದಲ್ಲಿ ಅದಕ್ಕೆ ತಕ್ಕ ಪ್ರಾತಿನಿಧ್ಯ ಸಿಗಬೇಕು, ಝಮೀರ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು, ಇಲ್ಲದಿದ್ದರೆ ಇದೇ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತೆ, ಯಾವುದೋ AI ಜನರೇಟೆಡ್ ಆಡಿಯೋ ಇಟ್ಟುಕೊಂಡು ಝಮೀರ್ ಅಹ್ಮದ್ ವಿರುದ್ಧ ಷಡ್ಯಂತ್ರ ನಡೆದಿದೆ, ಇದನ್ನು ಕಾಂಗ್ರೆಸ್ ಹೈ ಕಮಾಂಡ್ ಗಮನಿಸಬೇಕು ನ್ಯಾಯ ಒದಗಿಸಬೇಕು ಎಂದು ಬೆಂಬಲಿಗರು ಆಗ್ರಹಿಸಿದರು.
