ಬೆಂಗಳೂರು: ಬಿಜೆಪಿ ನಾಯಕ ಸಿ.ಟಿ. ರವಿ ಅವರು ನೀಟ್ (NEET) ಪ್ರತಿಭಟನೆಯಲ್ಲಿ ಮುಲ್ಲಾಗಳ (ಮುಸ್ಲಿಮರು) ಭಾಗವಹಿಸಿರುವುದನ್ನು ಪ್ರಶ್ನಿಸಿರುವ ಹೇಳಿಕೆಯನ್ನು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಮೆಹರೋಝ್ ಖಾನ್ ತೀವ್ರವಾಗಿ ಖಂಡಿಸಿದ್ದಾರೆ.
ಮುಲ್ಲಾಗಳಿಗೂ ನೀಟ್ ಪ್ರಶ್ನೆ ಪತ್ರಿಕೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೂ ಏನು ಸಂಬಂಧ ಎಂದು ಸಿ.ಟಿ. ರವಿ ವಿವಾದಾತ್ಮಕ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಮೆಹರೋಝ್ ಖಾನ್ ಅವರು ಸಿ.ಟಿ. ರವಿ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಧರ್ಮ, ಜಾತಿ, ಲಿಂಗ ಅಥವಾ ಸಮುದಾಯದ ಭೇದವಿಲ್ಲದೆ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಸಮಾಜದ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಶಾಂತಿಯುತವಾಗಿ ಪ್ರತಿಭಟಿಸುವ ಹಾಗೂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸಂವಿಧಾನಬದ್ಧ ಹಕ್ಕಿದೆ. ಈ ಹಕ್ಕು ಮುಲ್ಲಾಗಳಿಗೆ (ಮುಸ್ಲಿಮರಿಗೆ), ಪುರೋಹಿತರಿಗೆ ಹಾಗೂ ಎಲ್ಲ ಧರ್ಮಗಳ ಧಾರ್ಮಿಕ ಮುಖಂಡರಿಗೂ ಸಮಾನವಾಗಿ ಅನ್ವಯಿಸುತ್ತದೆ.
ಭಾರತೀಯ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಶಾಂತಿಯುತವಾಗಿ ಸಭೆ ಸೇರುವ ಹಕ್ಕನ್ನು ಖಾತರಿಪಡಿಸಿದೆ.
ಪದೇಪದೇ ನೀವು ಮುಲ್ಲಾಗಳ ಎದೆಯನ್ನು ಸೀಳಿದರೆ ಎರಡಕ್ಷರ ಕಾಣಸಿಗಲ್ಲ ಎಂದು ಹೇಳುತ್ತಿರುವವರು, ಮಾನ್ಯ ಪ್ರಧಾನಿ ಮೋದಿಯವರು ಅರಬ್ ರಾಷ್ಟ್ರಗಳಿಗೆ ಹೋದಾಗಲೆಲ್ಲ ಮುಲ್ಲಾಗಳನ್ನು ತಬ್ಬಿಕೊಳ್ಳುತ್ತಾರಲ್ಲ, ಅವರಲ್ಲಿ ಏಕೆ ನೀವು ಕೇಳಲ್ಲ ಎಂದು ಖಾರವಾಗಿ ಸಿ.ಟಿ. ರವಿ ಅವರನ್ನು ಮೆಹರೋಝ್ ಖಾನ್ ಪ್ರಶ್ನಿಸಿದ್ದಾರೆ.
ನಿಮ್ಮ ನಾಲಗೆಯನ್ನು ಹಿಡಿತದಲ್ಲಿಟ್ಟುಕೊಂಡು ಮಾತನಾಡಿ, ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕು ಎಂಬುದನ್ನು ತಾವು ಒಬ್ಬ ಜನಪ್ರತಿನಿಧಿಯಾಗಿ ಕಲಿಯುವುದು ಬಹಳಷ್ಟಿದೆ .
ಮುಲ್ಲಾಗಳ ಬಗ್ಗೆ ನಿಮಗೆ ಇನ್ನಷ್ಟು ಮಾಹಿತಿಬೇಕಿದ್ದರೆ ದೆಹಲಿಯ ಇಂಡಿಯಾ ಗೆಟ್ ಬಳಿ ಹೋಗಿ ನೋಡಿ, ಅಲ್ಲಿ ಮುಲ್ಲಾಗಳು ಮಾಡಿರುವಂಥ ತ್ಯಾಗ ಹಾಗು ಬಲಿದಾನ ಏನು ಎಂಬುದು ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ನೀಟ್ ಸಮಸ್ಯೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಎಲ್ಲ ಸಮುದಾಯಗಳ ನಾಗರಿಕರಿಗೆ ಸಂಬಂಧಿಸಿದ ವಿಷಯವಾಗಿದೆ. ಇದನ್ನು ಧರ್ಮದ ಆಧಾರದ ಮೇಲೆ ವಿಭಜಿಸುವ ಅಥವಾ ಕೋಮುವಾದದ ಬಣ್ಣ ಬಳಿಯುವ ಪ್ರಯತ್ನ ಸಲ್ಲದು. ಸಂವಿಧಾನವು ಪ್ರತಿಪಾದಿಸಿರುವ ನ್ಯಾಯ, ಸಮಾನತೆ ಮತ್ತು ಸಹೋದರತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ಮೆಹರೋಝ್ ಖಾನ್ ಹೇಳಿದ್ದಾರೆ.
