ನವದೆಹಲಿ: ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಹಾಗೂ ಶಿಕ್ಷಣತಜ್ಞ ಮತ್ತು ಪರಿಸರವಾದಿ ಸೋನಮ್ ವಾಂಗ್ಚೂಕ್ ಅವರು ಕಳೆದ 26 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಇದೀಗ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಲಾಗುತ್ತಿದೆ.
ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯ ಕಾವು ಈಗ ಅಂತರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿದ್ದು, ನಿಮ್ಮ ಪ್ರೀತಿಯ ಗೆಳೆಯ ಮೋದಿಗೆ ರಾಜೀನಾಮೆ ನೀಡುವಂತೆ ಹೇಳಿ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಅವರ ಇನ್‌ಸ್ಟಾಗ್ರಾಂನಲ್ಲಿ ಆಗ್ರಹಿಸಲಾಗುತ್ತಿದೆ.
ಇತ್ತೀಚಿಗೆ ಜಾರ್ಜಿಯಾ ಮೆಲೋನಿ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಒಂದಕ್ಕೆ ನೆಟ್ಟಿಗರು ಹಾಗೂ ವಿದ್ಯಾರ್ಥಿಗಳ ಬೆಂಬಲಿಗರು ಕಮೆಂಟ್ ಗಳ ಸುಳಿಮಳೆಗೈದಿದ್ದು, ಜುಲೈ 20 ರಂದು ಸಂಸತ್ ಚಲೋ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಉಲ್ಲೇಖಿಸಿ, ಮೋದಿ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
'ದಯವಿಟ್ಟು ಮೋದಿ ಅವರಿಗೆ ಭಾರತದ ವಿದ್ಯಾರ್ಥಿಗಳ ಧ್ವನಿಯನ್ನು ಆಲಿಸುವಂತೆ ಹೇಳಿ. ಮೋದಿ ದಯವಿಟ್ಟು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ. ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಮೋದಿ ಅವರ ಕೈಯಲ್ಲಿದೆ' ಎಂದು ನೆಟ್ಟಿಗರು ಸಾಲು ಸಾಲು ಕಮೆಂಟ್ ಗಳನ್ನು ಮಾಡಿದ್ದಾರೆ.
ಶಿಕ್ಷಣ ವ್ಯವಸ್ಥೆಯ ಸುಧಾರಣೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳಿಗೆ ಹೊಣೆಗಾರಿಕೆ ನಿಗದಿಪಡಿಸುವುದು, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಕಠಿಣ ಕ್ರಮದ ಬಗ್ಗೆ ಕೇಂದ್ರ ಸರ್ಕಾರ ಲಿಖಿತ ಭರವಸೆ ನೀಡಿದ ನಂತರ ಸೋನಮ್ ವಾಂಗ್ಚೂಕ್ ಅವರು ತಮ್ಮ 26 ದಿನಗಳ ಉಪವಾಸ ಅಂತ್ಯಗೊಳಿಸಿದ್ದಾರೆ.
