ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕೇಂದ್ರದಿಂದ ಕಠಿಣ ಮಸೂದೆ ಜಾರಿಗೆ; 10 ವರ್ಷ ಜೈಲು ಶಿಕ್ಷೆ, 1 ಕೋಟಿ ರೂ. ದಂಡ; ಮತ್ತೆನೆಲ್ಲಾ ಇದೆ ನೋಡಿ...

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವಂತೆಯೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ. ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಠಿಣ ಮಸೂದೆ ಜಾರಿಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ನೀಡಿದೆ.

2024ರಲ್ಲೂ ಇದೇ ರೀತಿಯ ಹೊಸ ಕಾನೂನನ್ನು ಜಾರಿಗೆ ತಂದಿತ್ತು. ಪಬ್ಲಿಕ್ ಪರೀಕ್ಷೆಗಳ ಅಕ್ರಮಗಳ ತಡೆ ಕಾಯ್ದೆ 2024ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ ಸುಮಾರು 4 ತಿಂಗಳ ನಂತರ ಅದೇ ವರ್ಷದ ಜೂನ್ ತಿಂಗಳಲ್ಲಿ ಬಿಲ್ ಅಧಿಸೂಚನೆ ಹೊರಡಿಸಲಾಗಿತ್ತು.

ಈ ಕಾನೂನು ಜಾರಿಗೆ ಬರುವ ಮುನ್ನಾ ಕೇಂದ್ರ ಸರ್ಕಾರ ಮತ್ತು ಅದರ ಸಂಸ್ಥೆಗಳು ನಡೆಸುವ ಪರೀಕ್ಷೆಗಳಲ್ಲಿ ಅಕ್ರಮ ಮಾರ್ಗ ಅನುಸರಿಸುವ ಅಥವಾ ಅಪರಾಧವೆಸಗುವ ವಿವಿಧ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ನಿರ್ದಿಷ್ಟ ಹಾಗೂ ಸಮಗ್ರ ಕಾನೂನು ಇರಲಿಲ್ಲ.

ಈ ಕಾಯ್ದೆಯು ಕೇಂದ್ರ ಲೋಕಸೇವಾ ಆಯೋಗ (UPSC), ಸಿಬ್ಬಂದಿ ನೇಮಕಾತಿ ಆಯೋಗ (SSC), ರೈಲ್ವೆ, ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳು ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮುಂತಾದವು ನಡೆಸುವ ಪಬ್ಲಿಕ್ ಪರೀಕ್ಷೆಗಳಲ್ಲಿ ಅಕ್ರಮ ಮಾರ್ಗಗಳನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ.

ನಕಲು ಮಾಡುವುದನ್ನು ತಡೆಯಲು ಈ ಹಿಂದಿನ ಮಸೂದೆಯಲ್ಲಿ ಕನಿಷ್ಠ ಮೂರರಿಂದ ಐದು ವರ್ಷಗಳ ಜೈಲು ಶಿಕ್ಷೆಯ ಅವಕಾಶವಿತ್ತು. ಆದರೆ, ಸಂಘಟಿತ ಅಪರಾಧದ ಮೂಲಕ ನಕಲು ಮಾಡುವಲ್ಲಿ ಭಾಗಿಯಾದವರಿಗೆ ಐದರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ 1 ಕೋಟಿ ರೂ. ದಂಡ ವಿಧಿಸುವ ಅವಕಾಶವನ್ನು ಇದರಲ್ಲಿ ಕಲ್ಪಿಸಲಾಗಿದೆ.

ಮಸೂದೆಯು ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡುವುದು, OMR ಹಾಳೆಗಳನ್ನು ತಿರುಚುವುದು, ನಕಲಿ ವೆಬ್‌ಸೈಟ್‌ಗಳನ್ನು ರಚಿಸುವುದು ಮತ್ತು ನಕಲಿ ಪ್ರವೇಶ ಪತ್ರಗಳನ್ನು ನೀಡುವುದು ಸೇರಿದಂತೆ 15 ಕಾನೂನುಬಾಹಿರ ಕೃತ್ಯಗಳನ್ನು ವಿವರಿಸುತ್ತದೆ.