ಪಡುಬಿದ್ರಿ: ಹೆಜಮಾಡಿ ಹಾಗೂ ಪಡುಬಿದ್ರಿ ಭಾಗದ ಸ್ಥಳೀಯರ ಹಕ್ಕುಗಳ ರಕ್ಷಣೆಗೆ ಆಗಸ್ಟ್ 1ರಂದು ಬೆಳಿಗ್ಗೆ 10 ಗಂಟೆಗೆ ಹೆಜಮಾಡಿ ಟೋಲ್ ಪ್ಲಾಜಾ ಬಳಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರ ಮಾರ್ಗದರ್ಶನದಲ್ಲಿ ನಡೆಯಲಿರುವ ಬೃಹತ್ ಟೋಲ್ ಹೋರಾಟದ ಅಂಗವಾಗಿ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಪೂರ್ವಭಾವಿ ಸಭೆ ಹಾಗೂ ಹೋರಾಟದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಸಭೆಯಲ್ಲಿ ಬೃಹತ್ ಟೋಲ್ ಹೋರಾಟದ ಅಧಿಕೃತ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸ್ಥಳೀಯ ವಾಹನಗಳಿಗೆ ಶಾಶ್ವತ ಟೋಲ್ ವಿನಾಯಿತಿ ಹಾಗೂ ಸ್ಥಳೀಯ ಪಾಸ್ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಒತ್ತಾಯಿಸಿ ಆಗಸ್ಟ್ 1ರಂದು ಸಾವಿರಾರು ಜನರೊಂದಿಗೆ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು.
ಇದೇ ವೇಳೆ, ಸಾರ್ವಜನಿಕ ಕಾಮಗಾರಿ ಇಲಾಖೆ (PWD) ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಟೋಲ್ ತೆರವುಗೊಳಿಸುವಂತೆ ಆಗ್ರಹಿಸಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ತೀರ್ಮಾನ ಕೈಗೊಳ್ಳಲಾಯಿತು. ಪ್ರತಿಭಟನೆಯ ಯಶಸ್ಸಿಗಾಗಿ ಪ್ರತಿಯೊಂದು ಬೂತ್‌ನಿಂದ ಕನಿಷ್ಠ 50 ಮಂದಿ ಕಾರ್ಯಕರ್ತರು ಕಡ್ಡಾಯವಾಗಿ ಭಾಗವಹಿಸುವಂತೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು.
ಈಗಾಗಲೇ ಹೆಜಮಾಡಿ, ಎರ್ಮಾಳು, ಪಲಿಮಾರು ಹಾಗೂ ಪಡುಬಿದ್ರಿ ಭಾಗದ ವಿವಿಧ ಸಂಘ-ಸಂಸ್ಥೆಗಳು, ಧಾರ್ಮಿಕ, ಸಾಮಾಜಿಕ, ವಿದ್ಯಾರ್ಥಿ ಹಾಗೂ ಯುವ ಸಂಘಟನೆಗಳು ಪಕ್ಷಾತೀತವಾಗಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವುದಾಗಿ ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ಅಧ್ಯಕ್ಷ ವ್ಯೆ. ಸುಕುಮಾರ್, ಕೆಪಿಸಿಸಿ ಸಂಯೋಜಕ ನವೀನ್‌ಚಂದ್ರ ಜೆ. ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸುಧೀರ್ ಕರ್ಕೇರ, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಭೋದ್ ಚಂದ್ರ ಹೆಜಮಾಡಿ, ಪ್ರಮುಖರಾದ ನವೀನ್ ಎನ್. ಶೆಟ್ಟಿ, ಮಹಮ್ಮದ್ ನಿಯಾಝ್, ಸುಚರಿತಾ ಅಮೀನ್, ಅಶೋಕ್ ಸಾಲಿಯಾನ್, ಹಸನ್ ಬಾವ, ವಿಶಾಲ್ ವಿ. ಬಂಗೇರ, ದೀಕ್ಷಾ ಕೆ. ಹೆಜಮಾಡಿ, ಅಬ್ದುಲ್ ಮಜೀದ್, ಸುನಂದಾ ಸಾಲಿಯಾನ್, ಅಬ್ದುಲ್ ಖಾದರ್, ಸುಬ್ಬಯ್ಯ ಮುಲ್ಯ, ರಿಫಾನ್, ನಾರಾಯಣ್ ಕಲ್ಲಟ್ಟೆ, ಲಿಯಾಖಾತ್ ಮುನ್ನ, ವಿಠಲ್ ಮಾಸ್ಟರ್, ಕೀರ್ತಿ ಕುಮಾರ್, ಮುಬೀನಾ ಬೇಗಮ್, ತಸ್ಲೀನ್ ಆರಾ, ಜ್ಯೋತಿ ಮೆನನ್, ಅಬ್ದುಲ್ ರಝಾಕ್, ಮುಯ್ಯಿದ್ದೀನ್ ಪಿ.ಕೆ., ಕಿರಣ್ ಪ್ರತಾಪ್, ಉಷಾ, ಹಕೀಮ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೀಝ್ ಹುಸೇನ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಪಡುಬಿದ್ರಿ ವಂದಿಸಿದರು.

