ಸರಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳ ಕೊಡುಗೆ ಅಪಾರ: ಯಶ್‌ಪಾಲ್ ಸುವರ್ಣ

ಉಡುಪಿ: ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಸಾಧನೆಯಲ್ಲಿ ದಾನಿಗಳ ಸಹಕಾರ ಅತ್ಯಂತ ಮಹತ್ವದ್ದಾಗಿದೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ ಹೇಳಿದರು.

ತೆಂಕನಿಡಿಯೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)ದಲ್ಲಿ ನೂತನ ಶೌಚಾಲಯ, ಸೈಕಲ್ ಸ್ಟ್ಯಾಂಡ್, ವಿದ್ಯಾರ್ಥಿಗಳ ಶಾಲಾ ಸಂಸತ್ ಹಾಗೂ ಯಕ್ಷ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಆರಂಭಿಸಲಾದ ಯಕ್ಷಗಾನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾಭಿವೃದ್ಧಿ ಸಮಿತಿಯ ಮನವಿಯಂತೆ ಸುಮಾರು ₹4 ಲಕ್ಷ ವೆಚ್ಚದಲ್ಲಿ ನೂತನ ಶೌಚಾಲಯ ನಿರ್ಮಿಸಲಾಗಿದೆ. ಇದೇ ವೇಳೆ ಶಾಲೆಯ ಮಾಜಿ ಶಿಕ್ಷಕಿ ದಿ. ಪ್ರಕಾಶಿನಿ ಅವರ ಸ್ಮರಣಾರ್ಥ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸೈಕಲ್ ಸ್ಟ್ಯಾಂಡ್ ನಿರ್ಮಿಸಿ ಶಿಕ್ಷಣಕ್ಕೆ ಸಹಕಾರ ನೀಡಿದ ಕುಟುಂಬ ಸದಸ್ಯರ ಸೇವೆ ಶ್ಲಾಘನೀಯ ಎಂದು ಹೇಳಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಗದೀಶ್ ಆಚಾರ್ಯ, ಮಾಜಿ ಅಧ್ಯಕ್ಷೆ ಸುಕನ್ಯ ಶೆಟ್ಟಿ, ಮಾಜಿ ನಗರಸಭಾ ಸದಸ್ಯ ವಿಜಯ ಕೊಡವೂರು, ದಾನಿ ಆನಂದ್, ಶರತ್ ಬೈಲಕೆರೆ, ಗಾಯತ್ರಿ ಸುರೇಶ್, ಕೃಷ್ಣ ಶೆಟ್ಟಿ, ಚರಣ್ ರಾಜ್, ಯಕ್ಷಗಾನ ಗುರು ರತ್ನಾಕರ ಶೆಣೈ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ಉಪಸ್ಥಿತರಿದ್ದರು.

ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎನ್. ಸ್ವಾಗತಿಸಿದರು. ಶಿಕ್ಷಕ ದಿವಾಕರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.