ಇಸ್ರೇಲ್-ಇರಾನ್ ಸಂಘರ್ಷ; 'ಆಪರೇಷನ್ ಸಿಂಧು' ಮೂಲಕ ಇರಾನ್‌ನಿಂದ 110 ಭಾರತೀಯ ವಿದ್ಯಾರ್ಥಿಗಳು ತಾಯ್ನಾಡಿಗೆ: ನವದೆಹಲಿಗೆ ಬಂದಿಳಿದ ಮೊದಲ ವಿಮಾನ

ನವದೆಹಲಿ: ಯುದ್ಧಪೀಡಿತ ಇರಾನ್‌ನಿಂದ ಅರ್ಮೇನಿಯಾಗೆ ಸ್ಥಳಾಂತರಿಸಲ್ಪಟ್ಟ 110 ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ಮೊದಲ ವಿಮಾನ ಬುಧವಾರ ತಡರಾತ್ರಿ ನವದೆಹಲಿಗೆ ಬಂದಿಳಿದಿದೆ.

ಈ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ 'ಆಪರೇಷನ್ ಸಿಂಧು' ಎಂದು ಹೆಸರಿಟ್ಟಿದ್ದು, ಕಾರ್ಯಾಚರಣೆ ಮೂಲಕ ಭಾರತೀಯರನ್ನು ಸ್ಥಳಾಂತರಿಸಲಾಗುತ್ತಿದೆ.

ಇಸ್ರೇಲ್-ಇರಾನ್ ನಡುವಿನ ಸಂಘರ್ಷ ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ನಡುವೆ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಮೊದಲು ನಗರದಿಂದ ಹೊರಗೆ ಸ್ಥಳಾಂತರಿಸಲಾಗಿತ್ತು.

ಈ ಪೈಕಿ 110 ಮಂದಿ ಇರಾನ್ ಗಡಿ ದಾಟಿ ನೆರೆಯ ಅರ್ಮೇನಿಯಾ ದೇಶಕ್ಕೆ ತೆರಳಿದ್ದರು. ಈ ವಿದ್ಯಾರ್ಥಿಗಳನ್ನು ಇರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ನೆರವಿನೊಂದಿಗೆ ಸ್ವದೇಶಕ್ಕೆ ಕರೆಲಾಗಿದೆ.

ಇರಾನ್‌ ನಲ್ಲಿರುವ ಭಾರತೀಯರು ಟೆಹ್ರಾನ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ತುರ್ತು ಸಹಾಯವಾಣಿ ಸಂಪರ್ಕಿಸುವಂತೆ ಕೋರಿದೆ. ದೂರವಾಣಿ ಸಂಖ್ಯೆ: +989010144557, +989128109115; +989128109109.

ಇಸ್ರೇಲ್‌, ಇರಾನ್‌ ನಡುವಿನ ಸಂಘರ್ಷ ಇಂದು (ಜೂನ್‌ 17) ಸತತ ಐದನೇ ದಿನಕ್ಕೆ ಕಾಲಿಟ್ಟಿದ್ದು, ಯುದ್ಧಪೀಡಿತ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.

ಏತನ್ಮಧ್ಯೆ, ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘವು ಸ್ಥಳಾಂತರಿಸುವ ಪ್ರಯತ್ನಗಳನ್ನು ಪ್ರಾರಂಭಿಸಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಲಿದೆ.

ಉಳಿದ ಎಲ್ಲಾ ವಿದ್ಯಾರ್ಥಿಗಳನ್ನು ಶೀಘ್ರದಲ್ಲೇ ಸ್ಥಳಾಂತರಿಸಲಾಗುವುದು ಎಂದು ನಾವು ಭಾವಿಸುತ್ತೇವೆ ಎಂದು ಒಕ್ಕೂಟವು ಹೇಳಿಕೆಯಲ್ಲಿ ತಿಳಿಸಿದೆ.