'ಉಡುಪಿ-ಉಚ್ಚಿಲ ದಸರಾ'ಗೆ ವೈಭವದ ತೆರೆ; ಕಣ್ಮನ ಸೆಳೆದ ಭವ್ಯ ಶೋಭಾಯಾತ್ರೆ: ನವದುರ್ಗೆಯರ ಸಹಿತ ಶಾರದಾ ಮಾತೆಯ ವಿಗ್ರಹ ಜಲಸ್ತಂಭನ; ಹರಿದುಬಂದ ಜನಸಾಗರ
ಉಚ್ಚಿಲ: ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀಕ್ಷೇತ್ರ ಉಚ್ಚಿಲದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆಯುತ್ತಿರುವ 4ನೇ ವರ್ಷದ ‘ಉಡುಪಿ ಉಚ್ಚಿಲ ದಸರಾ’ ವೈಭವಕ್ಕೆ ಗುರುವಾರ ರಾತ್ರಿ ಅಂತಿಮ ತೆರೆ ಬಿದ್ದಿದೆ.
ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕಳೆದ 11 ದಿನಗಳಿಂದ ನಡೆದ ದಸರಾ ಉತ್ಸವವು ನವದುರ್ಗೆಯರ ಸಹಿತ ಶಾರದಾ ಮಾತೆಯ ವಿಗ್ರಹ ಜಲಸ್ತಂಭನದೊಂದಿಗೆ ಸಮಾಪನಗೊಂಡಿತು.
ಇದಕ್ಕೂ ಮೊದಲು ನಡೆದ ವರ್ಣರಂಜಿತ ಶೋಭಾಯಾತ್ರೆ ಮೆರವಣಿಯು ಎಲ್ಲರ ಮನಸೂರೆಗೊಳಿಸಿತು. ಬಳಿಕ ಉಚ್ಚಿಲ ದಸರಾ ಉತ್ಸವ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳ ಜಲಸ್ತಂಭನಾ ಕಾರ್ಯವು ಸಾವಿರಾರು ಜನರ ಸಮ್ಮುಖದಲ್ಲಿ ಕಾಪು ಕೊಪ್ಪಲಂಗಡಿ ಕಡಲ ತೀರದಲ್ಲಿ ನೆರೆವೇರಿತು.
ದಸರಾ ರೂವಾರಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ. ಜಿ. ಶಂಕರ್ ಮಾರ್ಗದರ್ಶನದಲ್ಲಿ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ ನೇತೃತ್ವದಲ್ಲಿ ಸೆಪ್ಟೆಂಬರ್ 22ರಿಂದ ಆರಂಭವಾದ ದಸರಾಕ್ಕೆ ಗುರುವಾರ ಅದ್ದೂರಿಯ ತೆರೆಬಿದ್ದಂತಾಗಿದೆ.
ಈ ಬಾರಿಯ ದಸರಾದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದು, ಇತಿಹಾಸವನ್ನೇ ನಿರ್ಮಿಸಿದೆ. 11 ದಿನಗಳ ಕಾಲ ನಡೆದ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಕ್ಕೆ ರಾಜ್ಯವಲ್ಲದೆ, ದೇಶ-ವಿದೇಶಗಳಿಂದಲೂ ಜನ ಸಾಗರವೇ ಹರಿದುಬಂದಿತ್ತು.
ಶೋಭಾಯಾತ್ರೆಗೆ ಮೆರುಗು ತಂದ ಅತ್ಯಾಕರ್ಷಕ ಟ್ಯಾಬ್ಲೋ, ಭಜನಾ ತಂಡಗಳು, ವಾದ್ಯ ಮೇಳಗಳು...
ರಾಷ್ಟ್ರೀಯ ಹೆದ್ದಾರಿ 66 ಮತ್ತು ಕಾಪು ಬೀಚ್ ರಸ್ತೆಯಲ್ಲಿ 18- 20 ಕಿ.ಮೀ. ಉದ್ದದ ವರೆಗೆ ಶೋಭಾಯಾತ್ರೆ ಸಾಗಿತು. ಈ ಭವ್ಯ ಶೋಭಾಯಾತ್ರೆಯಲ್ಲಿ 60ಕ್ಕೂ ಹೆಚ್ಚು ಟ್ಯಾಬ್ಲೋ, ಭಜನಾ ತಂಡಗಳು, ವಾದ್ಯ ಮೇಳಗಳು ಭಾಗವಹಿಸುವ ಮೂಲಕ ಇನ್ನಷ್ಟು ಮೆರುಗು ತಂದುಕೊಟ್ಟಿತು.
ಈ ಬಾರಿ ಶೋಭಾಯಾತ್ರೆಯಲ್ಲಿ ಅಪರೇಶನ್ ಸಿಂದೂರ ಟ್ಯಾಬ್ಲೊ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಶೋಭಾಯಾತ್ರೆಯಲ್ಲಿ ಶಾರದೆ ಮತ್ತು ನವದುರ್ಗೆಯರನ್ನು ಹೊತ್ತ ಟ್ಯಾಬ್ಲೊಗಳ ಸಹಿತ ದೇವಸ್ಥಾನದ ಬಿರುದಾವಳಿ, ಸ್ಯಾಕ್ರೋಫೋನ್, ನಾಗಸ್ವರ, ಕೊಂಬು ಕಹಳೆ, ವಾದ್ಯ ಬ್ಯಾಂಡ್, ನಾಸಿಕ್ ಬ್ಯಾಂಡ್, ಚೆಂಡೆ, ಕೊಡೆ, ತಟ್ಟಿರಾಯ, ಕಥಕ್ಕಳಿ, ಥೈಯ್ಯಂ, ಭಜನಾ ತಂಡಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿತ್ತು.
ಆಮೆ, ಅಯೋಧ್ಯೆ ರಾಮ ಮಂದಿರ, ಉಚ್ಚಿಲ ಮಹಾಲಕ್ಷ್ಮೀ ದೇವರು, ಗಜಾಸುರ, ಹಂಸ ವಾಹಿನಿ ಮಹಾಲಕ್ಷ್ಮೀ, ದೋಣಿ, ರಾಧಾಕೃಷ್ಣ ವಿಲಾಸ, ಮಹಿಷಾಸುರ ಸಹಿತ ನವದುರ್ಗೆಯರು, ಬೃಹತ್ ಗೊಂಬೆಗಳು, ಮಹಿಳಾ ಬಳಗ, ಮಾಧವ ಮಂಗಳ ಗುರುಗಳ ಟ್ಯಾಬ್ಲೊ, ಸದಿಯ ಸಾಹುಕಾರ ಟ್ಯಾಬ್ಲೊ, ಹುಲಿ ವೇಷ, ಇಸ್ಕಾನ್ ಭಜನೆ, ಮಲ್ಪೆ ಭಜನಾ ಟ್ಯಾ ಬ್ಲೊ, ಪರ್ಸಿನ್ ಬೋಟ್ ಟ್ಯಾಬ್ಲೊ, ಡಿಜೆ ವಾಹನಗಳು ಮೆರವಣಿಗೆಯ ಸೊಗಸನ್ನು ಇಮ್ಮಡಿಗೊಳಿಸಿತು.
ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಿಂದ ಸಂಜೆ ನಾಡೋಜ ಡಾ.ಜಿ.ಶಂಕರ್ ಅವರ ಸಮ್ಮುಖದಲ್ಲಿ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಬಳಿಕ ಶೋಭಾಯಾತ್ರೆಯು ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ-ಮಂಗಳೂರು ರಸ್ತೆಯಲ್ಲಿ ಎರ್ಮಾಳು ಮಸೀದಿಯ ವರೆಗೆ ಸಾಗಿ, ಅಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಿರುಗಿ ಮಂಗಳೂರು-ಉಡುಪಿ ರಸ್ತೆ ಮೂಲಕವಾಗಿ ಉಚ್ಚಿಲ-ಮೂಳೂರು ಮಾರ್ಗವಾಗಿ ಕೊಪ್ಪಲಂಗಡಿಗೆ ತಲುಪಿತು.
ಬೃಹತ್ ಗಂಗಾರತಿ-ಜಲಸ್ತಂಭನ
ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಕೊಪ್ಪಲಂಗಡಿ ದೀಪಸ್ತಂಭದ ಬಳಿ 'ದಿ ಕೋಸ್ಟಲ್ ರೆಫ್ಯೂಶನ್' ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಬಳಿಕ ಬೀಚ್‌ನಲ್ಲಿ ಸುಮಂಗಲೆಯರಿಂದ ಕಾಶಿ ಗಂಗಾರತಿ ಮಾದರಿಯಲ್ಲಿ 10 ಬೃಹತ್ ಆರತಿಗಳೊಂದಿಗೆ ಮಹಾ ಮಂಗಳಾರತಿ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಪೂಜೆ-ಪುರಸ್ಕಾರ ನಡೆಯಿತು. ಈ ವೇಳೆ ಕಣ್ಮನ ಸೆಳೆಯುವಂಥ ಸುಡುಮದ್ದು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಬಳಿಕ ಉಡುಪಿ ಶಾಸಕ ಯಶಪಾಲ್ ಸುವರ್ಣ ನೇತೃತ್ವದಲ್ಲಿ ಬಾಲಕೃಷ್ಣ ಕೋಟ್ಯಾನ್ ಅವರ ತಂಡ ಏಕಕಾಲದಲ್ಲಿ ಎಲ್ಲ ವಿಗ್ರಹಗಳನ್ನು ಸಾವಿರಾರು ಜನರ ಸಮ್ಮುಖದಲ್ಲಿ ಜಲಸ್ತಂಭನ ಕಾರ್ಯವನ್ನು ನೆರವೇರಿಸಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿಕೆ, ದಸರಾ ರುವಾರಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಸಮಿತಿಯ ಗೌರವ ಸಲಹೆಗಾರ ನಾಡೋಜ ಡಾ. ಜಿ ಶಂಕರ್, ಅವರ ಧರ್ಮಪತ್ನಿ ಶಾಲಿನಿ ಜಿ.ಶಂಕರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಾಜನ ಸಂಘದ ಉಪಾಧ್ಯಕ್ಷರಾದ ದಿನೇಶ್ ಎರ್ಮಾಳು, ಮೋಹನ್ ಬೇಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್ ಸಹಿತ ಗಣ್ಯರು ಉಪಸ್ಥಿತರಿದ್ದರು. ದೇವಳದ ಪ್ರಬಂಧಕ ಸತೀಶ್ ಅಮೀನ್ ಪಡುಕರೆ ನಿರೂಪಿಸಿ, ವಂದಿಸಿದರು.
ಉಡುಪಿ ಉಚ್ಚಿಲ ದಸರಾದಲ್ಲಿನ ಅಚ್ಚುಕಟ್ಟುತನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ದಸರಾ ರೂವಾರಿ ಡಾ. ಜಿ. ಶಂಕರ್, ಪ್ರಮುಖರಾದ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಗಿರಿಧರ ಸುವರ್ಣ, ವಿನಯ್ ಕರ್ಕೇರ ಮುಂತಾದವರ ಶ್ರಮದಿಂದ ಈ ಬಾರಿ ದಸರಾ ಯಶಸ್ವಿಯಾಗಿ ನಡೆದಿದೆ.




























