ಉಡುಪಿ: ಚಿತ್ರಕಲಾವಿದ ಲಿಯಾಕತ್ ಅಲಿಯ ಅರೇಬಿಕ್ ಕ್ಯಾಲಿಗ್ರಫಿ ಪ್ರದರ್ಶನ-ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ
ಉಡುಪಿ: ನಮ್ಮ ಇಂದಿನ ಕಲಾವಿದರಿಗೆ ಸಮಾಜದ ಜನರ ಜೊತೆ ಜೊತೆಗೆ ಆಧುನಿಕ ಕೃತಕ ಬುದ್ಧಿಮತ್ತೆ (ಎಐ)ಯ ಸವಾಲನ್ನು ಎದುರಿಸುವ ಹೊಸ ಪರೀಕ್ಷೆ ಎದುರಾಗಿದೆ ಎಂದು ಉಡುಪಿಯ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದ್ದಾರೆ.
ನಗರದ ಕುಂಜಿಬೆಟ್ಟುನಲ್ಲಿರುವ ಇನಾಯತ್ ಆರ್ಟ್ ಗ್ಯಾಲರಿಯಲ್ಲಿ ಚಿತ್ರ ಕಲಾವಿದ ಲಿಯಾಕತ್ ಅಲಿ ಅವರ ಇತ್ತೀಚಿನ ಅರೇಬಿಕ್ ಕ್ಯಾಲಿಗ್ರಫಿ ಕಲಾ ಪ್ರದರ್ಶನ ಮತ್ತು ಗಾಂಧಿ ಜಯಂತಿ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಮತ್ತು ಪ್ರದರ್ಶನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸ್ವಯಂಸ್ಪೂರ್ತಿಯಿಂದ, ಸ್ವಸಂತೋಷದಿಂದ ಮಾಡುವ ಕೆಲಸ ಯಾವತ್ತೂ ಭಾರವಾಗದು. ಸರಿಯಾದ ನೀರು, ಗೊಬ್ಬರ, ಬೆಳಕು, ಗಾಳಿಯಿಂದ ಬೀಜ ಮೊಳಕೆಯೊಡೆದು, ಹೆಮ್ಮರವಾಗಿ ಫಲ ನೀಡುವಂತೆ ಮಕ್ಕಳಲ್ಲಿರುವ ಕಲೆಯ ಪ್ರತಿಭೆ, ಸಾಮರ್ಥ್ಯ ಅಭಿವ್ಯಕ್ತಿಗೆ ಅವಕಾಶ, ಪೋಷಣೆ ಅಗತ್ಯ ಎಂದು ಅವರು ಪೋಷಕರಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆಪಿಸಿಸಿ ಅಲ್ಪಸಂಖ್ಯಾತ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೇಕ್ ವಾಹಿದ್ ದಾವೂದ್ ಅವರು ತಮ್ಮ ಕುಟುಂಬದ ಟ್ರಸ್ಟಿನ ಮೂಲಕ ಫಿಸಿಯೊತೆರಪಿ ಇಕ್ವಿಪ್ಮೆಂಟ್ ನ್ನು ನೇಜಾರಿನ ನೂರುಲ್ ಫುರ್ಕಾನ್ ಸ್ಪೆಷಲ್ ಸ್ಕೂಲ್'ಗೆ ವಿತರಿಸಿದರು.
ಬಳಿಕ ಮಾತನಾಡಿದ ಶೇಕ್ ವಾಹಿದ್ ದಾವೂದ್, ಇಂದಿನ ಆಧುನಿಕ ಯುಗದಲ್ಲಿ ನಮ್ಮ ಮಕ್ಕಳು ಮೊಬೈಲಿನ ಹಿಂದೆ ಹೋಗುತ್ತಿದ್ದಾರೆ. ಅದನ್ನು ತಪ್ಪಿಸಿ, ಈ ರೀತಿಯ ಕಲೆಯ ಹಿಂದೆ ಹೋಗುವಂತೆ ಮಾಡಬೇಕಾದ ಜವಾಬ್ದಾರಿ ಪೋಷಕರಾದ ನಮ್ಮ ಮೇಲಿದೆ. ನಾವೆಲ್ಲಾ ಒಂದಲ್ಲ ಒಂದು ರೀತಿಯ ಕಲಾವಿದರೇ. ನಾನು ಕೂಡ ಕಾಲೇಜಿನ ಸಮಯದಲ್ಲಿ ಕಲೆಯ ಹಿಂದೆ ಹೋಗಲು ಪ್ರಯತ್ನಿಸಿದ್ದೆ, ಅದು ಸಾಧ್ಯ ಆಗಲಿಲ್ಲ. ಕಲೆ ಎಂಬುದು ಎಲ್ಲರಿಗೂ ಒಲಿಯುವ ವಸ್ತು ಅಲ್ಲದಿದ್ದರೂ, ಪ್ರಯತ್ನ ಪಟ್ಟರೆ ಅದು ಸಾಧ್ಯ ಎಂದರು.
ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿಯ ಮಹಾ ಪ್ರಬಂಧಕ ಎಚ್.ಕೆ. ಗಂಗಾಧರ, ಕೆಪಿಸಿಸಿ ಅಲ್ಪಸಂಖ್ಯಾತ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೇಕ್ ವಾಹಿದ್ ದಾವೂದ್, ಉದ್ಯಮಿ ಯ.ವಿಶ್ವನಾಥ್ ಶೆಣೈ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಂಗಳೂರಿನ ಮೊಹಮ್ಮದ್ ಸಹಿನ್, ಇಂದ್ರಾಳಿ ಮಸೀದಿಯ ಖಾಸ್ಮಿ ಮೌಲಾನಾ ಮಸಿಯುಲ್ಲಾ ಖಾನ್, ಇನಾಯತ್ ಆರ್ಟ್ ಗ್ಯಾಲರಿಯ ಲಿಯಾಕತ್ ಅಲಿ ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕರ್ವಾಲ್ ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು.
ಚಿತ್ರಕಲಾ ಪ್ರದರ್ಶನ ಅ.6ರವರೆಗೆ ಬೆಳಗ್ಗೆ 10ರಿಂದ ಸಂಜೆ 7 ಗಂಟೆ ಯವರೆಗೆ ಸಾರ್ವಜನಿಕರ ತೆರೆದಿರುತ್ತದೆ. ಅ.6ರಂದು ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.
ಪ್ರದರ್ಶನದಲ್ಲಿ ಲಿಯಾಕತ್ ಅಲಿ ಅವರ 30 ಅರೇಬಿಕ್ ಕ್ಯಾಲಿಗ್ರಫಿ ಹಾಗೂ ಗಾಂಧೀಜಿಯವರ 20 ವರ್ಣಚಿತ್ರಗಳು ಪ್ರದರ್ಶನಗೊಂಡಿವೆ.








