ಗಲ್ಗೋಟಿಯಾಸ್ ಯೂನಿವರ್ಸಿಟಿ ಎಡವಟ್ಟು ದೇಶಕ್ಕೆ ಮಾಡಿದ ಅವಮಾನ: ಎ ಕೆ ಅನ್ಸಾಫ್
ಜಾಗತಿಕ ವೇದಿಕೆಯಲ್ಲಿ ಭಾರತದ ಹೆಸರು ಎತ್ತರಕ್ಕೆ ಏರಬೇಕಾದ ಕಾಲವಿದು , ಕೃತಕ ಬುದ್ಧಿಮತ್ತೆ (AI) ಎಂಬ ಭವಿಷ್ಯದ ಕ್ಷೇತ್ರದಲ್ಲಿ ನಾವು ವಿಶ್ವದ ಮುಂಚೂಣಿಯಲ್ಲಿ ನಿಲ್ಲಬಹುದಾದ ಸಾಮರ್ಥ್ಯ ನಮ್ಮ ದೇಶಕ್ಕೆ ಇದೆ ಆದರೆ ಇಂತಹ ಸಂದರ್ಭದಲ್ಲಿ Galgotias University ನಡೆಸಿದ ಈವೊಂದು ಪ್ರಹಸನ ದೇಶದ ಮಾನಕ್ಕೆ ಕಳಂಕ ತಂದಿದೆ ಎಂದು ಕೆಪಿಸಿಸಿ ಸಂಯೋಜಕರೂ ಹಾಗೂ ಕಡಲ ತೀರಾ ವಲಯ ನಿರ್ವಹಣಾ ಸಮಿತಿ ಸದಸ್ಯ ಎ ಕೆ ಅನ್ಸಾಫ್ ಆರೋಪಿಸಿದ್ದಾರೆ.
ಚೀನಾದ Unitree Robotics ನಿರ್ಮಿಸಿದ Unitree Robodog ಅನ್ನು ತಮ್ಮದೇ ಸಾಧನೆ ಎಂಬಂತೆ ಪ್ರದರ್ಶಿಸಿರುವ ಘಟನೆ ಸಾಮಾನ್ಯ ತಪ್ಪಲ್ಲ — ಅದು ಉದ್ದೇಶಪೂರ್ವಕವಾಗಿ ದೇಶದ ಗೌರವವನ್ನು ಪಣಕ್ಕಿಟ್ಟಂತಾಗಿದೆ ಜಾಗತಿಕ ಮಟ್ಟದ AI Impact Summit ವೇದಿಕೆಯಲ್ಲಿ ಇಂತಹ ಪ್ರದರ್ಶನ ನೀಡುವುದು ಕೇವಲ ಸಂಸ್ಥೆಯ ಗೌರವಕ್ಕೆ ಮಾತ್ರವಲ್ಲ, ಭಾರತದ ವೈಜ್ಞಾನಿಕ ನಂಬಿಕೆಗೂ ಹೊಡೆತ ನೀಡಿದಂತಾಗಿದೆ..
ತಕ್ಷಣದ ಪ್ರಚಾರ, ಫೋಟೋ-ಆಪ್ ಮತ್ತು ಖ್ಯಾತಿಗಾಗಿ ದೇಶದ ಹೆಸರನ್ನೇ ಬಳಸಿಕೊಳ್ಳುವ ಮನೋಭಾವ ಎಷ್ಟು ಸರಿ ? ತೀವ್ರ ಟೀಕೆಗಳು ಕಂಡು ಬಂದ ನಂತರ “ನಾವು ನಿರ್ಮಿಸಿದ್ದೇವೆ ಎಂದು ಹೇಳಿಲ್ಲ” ಎಂಬ ಸ್ಪಷ್ಟನೆ ನೀಡಿರುವುದು, ಮೊದಲಿನ ನಡೆಯ ಹೊಣೆ ತಪ್ಪಿಸಿಕೊಳ್ಳುವ ಪ್ರಯತ್ನವಷ್ಟೇ ಎನ್ನಬಹುದು ಅಲ್ಲದೇ ಇನ್ನೇನೂ ?.
ಸಾಮಾಜಿಕ ಜಾಲತಾಣಗಳಲ್ಲಿ ತಕ್ಷಣವೇ ವಿರೋಧ ವ್ಯಕ್ತವಾಗದೇ ಇದ್ದಿದ್ದರೆ, ಒಪ್ಪುತ್ತಿದ್ದರೇ ? ಶಿಕ್ಷಣ ಸಂಸ್ಥೆಗಳು ಜ್ಞಾನ ಮತ್ತು ನೈತಿಕತೆಯ ಮಂದಿರವಾಗಿರಬೇಕು ಅದು ಬಿಟ್ಟು ಸುಳ್ಳು ಪ್ರಚಾರದ ಮೂಲಕ ಹೆಗ್ಗಳಿಕೆಯನ್ನು ಕಲೆಹಾಕುವ ಪ್ರಯತ್ನ ಮಾಡೋದಾದರೇ ಆ ಶಿಕ್ಷಣ ಸಂಸ್ಥೆಗಳು ತನ್ನ ವಿದ್ಯಾರ್ಥಿಗಳಿಗೆ ಯಾವ ಸಂದೇಶವನ್ನು ನೀಡುತ್ತದೆ?
“ಯಾವುದೇ ರೀತಿಯಾದರೂ ಸರಿ ಗಮನ ಸೆಳೆದುಬಿಡಿ” ಎಂಬ ತಪ್ಪು ಸಂದೇಶವನ್ನೇ ಕೊಡುವುದಲ್ಲವೇ? ನಿಜವಾದ ಸಂಶೋಧನೆ, ಕಠಿಣ ಪರಿಶ್ರಮ ಮತ್ತು ಮೂಲಭೂತ ಆವಿಷ್ಕಾರಗಳ ಬದಲು, ಇಂತಹ ನಕಲಿ ಪ್ರತಿಷ್ಠೆ ಹುಡುಕುವ ಪ್ರವೃತ್ತಿ ದೇಶದ ವಿಜ್ಞಾನ ಸಂಸ್ಕೃತಿಗೆ ಮಾರಕವಾಗಿ ಪರಿಣಮಿಸಲಿದೆ..
ಭಾರತದ ಯುವಜನತೆ ಅಪಾರ ಪ್ರತಿಭೆಯನ್ನು ಹೊಂದಿದ್ದಾರೆ , ಅವರಿಗೆ ಪ್ರೇರಣೆ ಬೇಕೇ ಹೊರತು, ಪ್ರಹಸನ ಬೇಡ. ನಾವು ಜಗತ್ತಿಗೆ ತೋರಿಸಬೇಕಾದದ್ದು ನಕಲಿ ಪ್ರದರ್ಶನವಲ್ಲ — ಮೂಲಭೂತ ಆವಿಷ್ಕಾರಗಳು, ನೈತಿಕ ನಾಯಕತ್ವ ಮತ್ತು ಪ್ರಾಮಾಣಿಕ ಪ್ರಯತ್ನಗಳು.
ಇದು ಕೇವಲ ಒಂದು ವಿಶ್ವವಿದ್ಯಾಲಯದ ವಿಚಾರವಲ್ಲ — ಇದು ದೇಶದ ಗೌರವ, ವೈಜ್ಞಾನಿಕ ಪ್ರಾಮಾಣಿಕತೆ ಮತ್ತು ಭವಿಷ್ಯದ ಪೀಳಿಗೆಯ ವಿಶ್ವಾಸದ ಪ್ರಶ್ನೆ.
ಜಾಗತಿಕ ವೇದಿಕೆಯಲ್ಲಿ ನಿಂತು ಸುಳ್ಳಿನ ನೆರಳಿನಲ್ಲಿ ಚಪ್ಪಾಳೆ ಕೇಳಿಸಿಕೊಳ್ಳುವುದು ಸುಲಭ; ಆದರೆ ಸತ್ಯದ ಬೆಳಕಿನಲ್ಲಿ ಗೌರವ ಗಳಿಸುವುದು ಕಷ್ಟ.
ನಾವು ಯಾವ ಮಾರ್ಗವನ್ನು ಆಯ್ಕೆ ಮಾಡುತ್ತೇವೆ ಎಂಬುದೇ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ.
ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ನೈತಿಕ ಮಾನದಂಡಗಳು ಜಾರಿಯಾಗಬೇಕು. ಇಲ್ಲವಾದರೆ, AI ಕ್ಷೇತ್ರದಲ್ಲಿ ವಿಶ್ವ ನಾಯಕತ್ವ ಸಾಧಿಸುವ ಕನಸು ಕೇವಲ ಭಾಷಣಗಳಲ್ಲೇ ಉಳಿಯುತ್ತದೆ.
"ಸತ್ಯವೇ ನಮ್ಮ ತಾಯಿ ತಂದೆ ಸತ್ಯವೇ ನಮ್ಮ ಬಂಧುಬಳಗ ಸತ್ಯ ಮಾತಿಗೆ ತಪ್ಪಿ ನಡೆದರೇ ಮೆಚ್ಚಲಾ ಪರಮಾತ್ಮನು" ಎಂಬ ಸುಂದರ ಸೊಗಸಾದ ಪುಣ್ಯಕೋಟಿಯ ಕಥೆಯನ್ನು ಕಲಿತು ಬಂದ ಭಾರತೀಯರಾದ ನಮಗೆ ಈ ಸುದ್ದಿಯನ್ನು ಅರಗಿಸಿಕೊಳ್ಳಲು ತುಸು ಕಷ್ಟವೇ ಸರಿ ಎಂದು ಎ ಕೆ ಅನ್ಸಾಫ್ ಬೇಸರ ವ್ಯಕ್ತಪಡಿಸಿದ್ದಾರೆ.