ಮರಳುಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿ ನಾಗರಮಠ ಗ್ರಾಮಸ್ಥರಿಂದ ಉಡುಪಿ ಜಿಲ್ಲಾಧಿಕಾರಿಗೆ ಮನವಿ
ಉಡುಪಿ: ಬ್ರಹ್ಮಾವರ ತಾಲೂಕಿನ ಬಾರಕೂರು ಸಮೀಪದ ಹೊಸಾಳ ಗ್ರಾಮದ ನಾಗರಮಠದ ಸೀತಾನದಿಯಲ್ಲಿ ಮರಳುಗಾರಿಕೆಯನ್ನು ಸ್ಥಗಿತಗೊಳಿಸಿ ಕೃಷಿಭೂಮಿ ಉಳಿಸುವಂತೆ ಆಗ್ರಹಿಸಿ ನಾಗರಮಠ ಗ್ರಾಮಸ್ಥರು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರಿಗೆ ಮನವಿ ಸಲ್ಲಿಸಿದರು.
ಇಲ್ಲಿ ನಡೆಯುವ ಮರಳು ಗಣಿಗಾರಿಕೆಯಿಂದ ಈಗಾಗಲೇ ಹಲವು ಕೃಷಿಭೂಮಿಗಳು ಮಣ್ಣಿನ ಸವೆತದಿಂದ ಸೀತಾ ನದಿಗೆ ಕೊಚ್ಚಿಕೊಂಡು ಹೋಗಿವೆ. 60 ಅಡಿ ಅಗಲ ಇದ್ದ ಸೀತಾನದಿ ಮರಳುಗಾರಿಕೆಯಿಂದ 160 ಅಡಿ ಅಗಲ ವಾಗಿದೆ. ಕೃಷಿಭೂಮಿಯಿಂದ ಕೂಡಿರುವ ಈ ಜಾಗ ಮರಳು ಗಾರಿಕೆಗೆ ಸೂಕ್ತವಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇಲ್ಲಿ ಮರಳುಗಾರಿಕೆಗೆ ಅನುಮತಿ ನೀಡಿರುವ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೂ ಹೆರಾಡಿ ಮೂಲಕ ಶಂಖಾಡಿ ಮಾರ್ಗವಾಗಿ ನಾಗರಮಠ ನದಿಗೆ ಸುಮಾರು ಒಂದು ಕೋಟಿ ರೂ. ಮೌಲ್ಯದ 24 ಅಡಿ ಅಗಲದ ಕೆಂಪು ಮಣ್ಣಿನ ರಸ್ತೆಯನ್ನು ಅಕ್ರಮವಾಗಿ ನಿರ್ಮಿಸಿ ಮರಳು ಸಾಗಿಸಲು ಸಿದ್ಧತೆ ನಡೆಸಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಅವೈಜ್ಞಾನಿಕ ಮರಳುಗಾರಿಕೆಯಿಂದ ಇಲ್ಲಿನ ನದಿಯು ತನ್ನ ಹಾದಿಯನ್ನು ಬದಲಾಯಿಸುತ್ತಿದೆ. ಇದರಿಂದ ರೈತರು ತಮ್ಮ ಕೃಷಿಭೂಮಿಯನ್ನು ಕಳೆದು ಕೊಳ್ಳುವ ಭೀತಿಯಲ್ಲಿದ್ದಾರೆ. ಮರಳುಗಾರಿಕೆ ಅವಕಾಶ ನೀಡಿರುವುದರಿಂದ ನಾಗರಮಠ ಅಣೆಕಟ್ಟಿನೊಳಗಿನ ಸಿಹಿನೀರು ಉಪ್ಪು ನೀರು ಆಗಿ ಪರಿವರ್ತನೆ ಆಗಲಿದೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಇಲ್ಲಿನ ಮರಳುಗಾರಿಕೆ ನೀಡಿದ ಅನುಮತಿಯನ್ನು ಕೂಡಲೇ ತಡೆಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯರಾದ ಚಂದ್ರ ಕಾಂಚನ್, ಅಶೋಕ್ ಕುಂದರ್, ಗಣೇಶ್ ಶೆಟ್ಟಿ, ಆಶಾ ಅಮೀನ್, ಉಷಾ, ಚಂದ್ರ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.