ಸೌದಿ ಅರೇಬಿಯಾ; ಕಾನೂನು ಪ್ರಕರಣವೊಂದರಲ್ಲಿ ಜೈಲಿಗೆ ಸೇರಿದ್ದ ಕರ್ನಾಟಕ ಮೂಲದ ಇಂಜಿನಿಯರ್ ಬಿಡುಗಡೆ
ಕೋಲಾರ / ದಮ್ಮಾಂ / ರಿಯಾದ್: ಸೌದಿ ಅರೇಬಿಯಾದಲ್ಲಿ ತಮ್ಮ ಕಂಪನಿಗೆ ಸಂಬಂಧಪಟ್ಟ ವಿಚಾರದಲ್ಲಿ ಜೈಲು ಸೇರಿದ್ದ ಕರ್ನಾಟಕ ಮೂಲದ ಸಿವಿಲ್ ಇಂಜಿನಿಯರ್ ಬೈರಡ್ಡಿ ಚೆನ್ನಕೇಶಪ್ಪ ಅವರು, ಸಾಮಾಜಿಕ ಕಾರ್ಯಕರ್ತ ಮತ್ತು ಕರ್ನಾಟಕ ಮೂಲದ ರಿಯಾದ್ ನ ವಕೀಲರ ಸತತ ಪ್ರಯತ್ನದಿಂದ ಬಿಡುಗಡೆಗೊಂಡು, ಕುಟುಂಬದೊಂದಿಗೆ ಸುರಕ್ಷಿತವಾಗಿ ಮರುಸೇರಿದ್ದಾರೆ.
ಬೈರಡ್ಡಿ ಚೆನ್ನಕೇಶಪ್ಪ ಅವರು ಕೋಲಾರ ಜಿಲ್ಲೆಯ ನಿವಾಸಿಯಾಗಿದ್ದು, ದಮ್ಮಾಮ್ ನಲ್ಲಿರುವ ಖಾಸಗಿ ನಿರ್ಮಾಣ ಸಂಸ್ಥೆಯಲ್ಲಿ ಸೈಟ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
2025ರ ಸೆಪ್ಟೆಂಬರ್‌ನಲ್ಲಿ ಅವರು ಏಕಾಏಕಿ ಕುಟುಂಬ ಹಾಗೂ ಸ್ನೇಹಿತರ ಸಂಪರ್ಕದಿಂದ ದೂರವಾಗಿದ್ದು, ಮೊಬೈಲ್ ಸಂಪರ್ಕವೂ ಲಭ್ಯವಿರದ ಕಾರಣ ಕುಟುಂಬದಲ್ಲಿ ತೀವ್ರ ಆತಂಕ ಮೂಡಿತ್ತು.
ಸ್ಪಷ್ಟ ಮಾಹಿತಿಯ ಕೊರತೆಯ ಹಿನ್ನೆಲೆಯಲ್ಲಿ, ಕುಟುಂಬವು ಗಲ್ಫ್ ಪ್ರದೇಶದಲ್ಲಿರುವ ಸಮುದಾಯ ಜಾಲಗಳ ಮೂಲಕ ಸಹಾಯವನ್ನು ಕೋರಿತು. ಈ ವಿಷಯವು ದುಬೈ ಮೂಲದ ಕನ್ನಡಿಗರಾದ (ದುಬೈ ಕನ್ನಡಿಗ ಸಂಘಟನೆಯ) ರಫೀಕ್ ಅಲಿ ಕುಂದಂಡ ಹಾಗೂ ಅವರ ಸ್ನೇಹಿತ ವರುಣ್ ಕೋಲಾರ ಅವರ ಮೂಲಕ, ಸೌದಿಯ ರಿಯಾದ್ ನಲ್ಲಿರುವ ಉಡುಪಿ ಮೂಲದ ಸಾಮಾಜಿಕ ಕಾರ್ಯಕರ್ತ ಹಾಗೂ ಪ್ರೊ-ಬೋನೋ ವಕೀಲರಾದ ಡಾ. ಹಾಗೂ ವಕೀಲ. ಪಿ. ಎ. ಹಮೀದ್ ಪಡುಬಿದ್ರಿ ಯವರ ಗಮನಕ್ಕೆ ತರಲಾಯಿತು.
ನಂತರ ನಡೆದ ಸಂಯೋಜಿತ ಪ್ರಯತ್ನಗಳು, ಸಂಸ್ಥೆಯೊಂದಿಗೆ ನಡೆಸಿದ ಸಂಪರ್ಕ ಮತ್ತು ಸಂಬಂಧಿತ ಅಧಿಕೃತ ಚಾನಲ್‌ಗಳ ಮೂಲಕ, ಬೈರಡ್ಡಿಯವರು ದಮ್ಮಾಮ್ ನಲ್ಲಿ ಪ್ರಕರಣವೊಂದರಲ್ಲಿ ಸಿಲುಕಿ ಜೈಲಿನಲ್ಲಿರುವುದಾಗಿ ದೃಢಪಟ್ಟಿತು.
ಬೈರೆಡ್ಡಿಯವರು, ಕಂಪನಿಯ ಯೋಜನೆಯೊಂದು ಪೂರ್ಣಗೊಂಡ ನಂತರ, ಕಂಪನಿಯಿಂದ ಲಿಖಿತ ಅನುಮತಿ ಪಡೆಯದೆ, ಕೆಲವು ನಿಷ್ಪ್ರೋಜಕ ವಸ್ತುಗಳನ್ನು ಮಾರಾಟಮಾಡಿದ ಪ್ರಕರಣವಾಗಿತ್ತು ಇದು. ತಮ್ಮ ಮೇಲಾಧಿಕಾರಿಯಿಂದ ಮೌಖಿಕ ಅನುಮತಿ ಪಡೆದಿದ್ದರೂ, ಅದು ಅವರ ಸಹಾಯಕ್ಕೆ ಬರಲಿಲ್ಲ. ಬೈರೆಡ್ಡಿಯವರು ಡಾ. ಪಿ. ಎ. ಹಮೀದ್ ರವರೊಂದಿಗೆ ಜೈಲಿನಿಂದ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ಸಹಾಯವನ್ನು ಪಡೆಯುತ್ತಿದ್ದರು.
ಸೌದಿಯಲ್ಲಿ ಕಾನೂನು ಪ್ರಕರಣಗಳಲ್ಲಿ ವಕೀಲರ ಶುಲ್ಕವೆಚ್ಚ (ಅದರಲ್ಲೂ ಕ್ರಮಿನಲ್ ಪ್ರಕರಣಗಳ ಶುಲ್ಕ) ಅತ್ಯಂತ ದುಬಾರಿಯಾದ್ದರಿಂದ, ಈ ಪ್ರಕರಣವನ್ನು ಔಟ್-ಆಫ್-ದ ಕೋರ್ಟ್ ಮುಖೇನ ವಿವಿಧ ಮೂಲಗಳ ಮೂಲಕ ಬಗೆಹರಿಸಲು ಡಾ. ಪಿ.ಎ. ಹಮೀದ್ ರವರು ಮುಂದಾದರು.
ಡಾ. ಪಿ. ಎ. ಹಮೀದ್ ರವರು ಅವರು ಕುಟುಂಬಕ್ಕೆ ಅಗತ್ಯ ಮಾರ್ಗದರ್ಶನ ಹಾಗೂ ಸಹಾಯ ಒದಗಿಸಿದ್ದು, ಸಂಸ್ಥೆಯೊಂದಿಗೆ ಸಂಯೋಜನೆ ನಡೆಸುವ ಜೊತೆಗೆ ದಮ್ಮಾಮ್ ಮಾನವ ಹಕ್ಕುಗಳ ಆಯೋಗ (Human Rights Commission-HRC) ಸೇರಿದಂತೆ ಸಂಬಂಧಿತ ಅಧಿಕೃತ ಸಂಸ್ಥೆಗಳ ಸಹಕಾರವನ್ನು ಪಡೆದರು. ಜೊತೆಗೆ, ಭಾರತೀಯ ರಾಯಭಾರ (Indian Embassy) ಕಚೇರಿಯಿಂದ ಅಧಿಕೃತ ಅನುಮತಿ ಪತ್ರವನ್ನು ಪಡೆದು, ಸ್ಥಳೀಯ ಕಾನೂನುಗಳ ಚೌಕಟ್ಟಿನೊಳಗೆ ಪ್ರಕ್ರಿಯೆಗಳನ್ನು ಅನುಸರಿಸಲಾಯಿತು.
ಡಾ. ಪಿ.ಎ. ಹಮೀದ್ ರವರ ಮೂರು ತಿಂಗಳ ಸತತ ಪ್ರಯತ್ನ ಮತ್ತು ಸಂಬಂಧಪಟ್ಟವರೊಂದಿಗೆ ನಡೆದ ಸಮನ್ವಯದ ಫಲವಾಗಿ, ಪ್ರಕರಣಕ್ಕೆ ಸಕಾರಾತ್ಮಕ ಪರಿಹಾರ ದೊರೆತು ಬೈರಡ್ಡಿ ಅವರನ್ನು ಬಿಡುಗಡೆಗೊಳಿಸಲಾಯಿತು. ಅವರು ಇದೀಗ ಕುಟುಂಬದೊಂದಿಗೆ ಸೇರಿಕೊಂಡಿದ್ದಾರೆ.
ಈ ಮೂಲಕ, ತಮ್ಮ ವಯಸ್ಸಾದ ತಂದೆ-ತಾಯಿ ಹಾಗೂ ನಿಕಟಕುಟುಂಬ ದವರ ಮೂರು ತಿಂಗಳ ಮಾನಸಿಕ ವೇದನೆ-ತುಮುಲಕ್ಕೆ ಸುಖಾಂತ್ಯ ನೀಡಿದಂತಾಗಿದೆ.
ಈ ಸಂದರ್ಭದಲ್ಲಿ ಬೈರಡ್ಡಿಯ ಬಾವ ನವೀನ್ (ಬೆಂಗಳೂರು) ಹಾಗೂ ದುಬೈನ ರಫೀಕ್ ಅಲಿ ಕುಂದಂಡ, ವರುಣ್ ಕೋಲಾರ ಅವರು, ಸಂಕಷ್ಟದ ಅವಧಿಯಲ್ಲಿ ಸಂಪೂರ್ಣ ಸಹಾಯಮಾಡಿದ ಸಾಮಾಜಿಕ ಕಾರ್ಯಕರ್ತರಾದ ವಕೀಲ, ಡಾ. ಪಿ. ಎ. ಹಮೀದ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ದಮ್ಮಾಮ್ ಮಾನವ ಹಕ್ಕುಗಳ ಆಯೋಗ ಹಾಗೂ ರಿಯಾದ್‌ನ ಭಾರತೀಯ ರಾಯಭಾರ ಕಚೇರಿ ನೀಡಿದ ಸಹಕಾರಕ್ಕೂ ಅವರು ಧನ್ಯವಾದಗಳನ್ನು ವ್ಯಕ್ತಪಡಿಸಿದ್ದಾರೆ.
ಈ ಘಟನೆ ವಿದೇಶಗಳಲ್ಲಿ ಸಂಕಷ್ಟಕ್ಕೆ ಒಳಗಾಗುವ ಭಾರತೀಯ ನಾಗರಿಕರಿಗೆ ಸಮುದಾಯ ಬೆಂಬಲ, ಸಾಮಾಜಿಕ ಕಾರ್ಯಕರ್ತರ ನೆರವು ಹಾಗೂ ರಾಜತಾಂತ್ರಿಕ ಚಾನಲ್‌ಗಳ ಮಹತ್ವವನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತದೆ. ಅನಿಶ್ಚಿತತೆಯಿಂದ ಆರಂಭವಾದ ಈ ಪ್ರಕರಣ, ಮಾನವೀಯ ಸಹಕಾರ ಮತ್ತು ಸೌದಿ ಅರೇಬಿಯಾದ ಕಾನೂನು ವ್ಯವಸ್ಥೆಯ ಮೂಲಕ ಸಕಾರಾತ್ಮಕ ಅಂತ್ಯವನ್ನು ಕಂಡಿದೆ.