ನಂದಳಿಕೆ: ಬೋಲ್ಪು ನಾಗರೀಕ ಸೇವಾ ಸಮಿತಿ ನೇತೃತ್ವದಲ್ಲಿ ನೂತನ ಮನೆ ಹಸ್ತಾಂತರ

ನಂದಳಿಕೆ: ಬೋಲ್ಪು ನಾಗರೀಕ ಸೇವಾ ಸಮಿತಿ, ಬಿಜೆಪಿ ಗ್ರಾಮ ಸಮಿತಿ ನಂದಳಿಕೆ, ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹಾಗೂ ವಿಕಾಸ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಪುಷ್ಪ ಅವರಿಗೆ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ ನೆರವೇರಿತು.







ಪುಷ್ಪ ಅವರು ಸರ್ಕಾರದ ಆಶ್ರಯ ಯೋಜನೆಯ ನಿರೀಕ್ಷೆಯಲ್ಲಿ ತಮ್ಮ ಹಳೆಯ ಮನೆಯನ್ನು ಕೆಡವಿ ನೂತನ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗದೆ ಇರುವ ಕಾರಣ ಮನೆ ಪಂಚಾಗಕ್ಕೆ ನಿಂತು ಹೋಯಿತು. 

ಈ ಸಂದರ್ಭದಲ್ಲಿ ವಾಸಿಸಲು ಬೇರೆ ವ್ಯವಸ್ಥೆಯಿಲ್ಲದೆ, ತಮ್ಮ ಹಳೆ ಮನೆಯ ಟಾಯ್ಲೆಟ್‌ನಲ್ಲೇ ತಮ್ಮ ದಿನನಿತ್ಯದ ಜೀವನವನ್ನು ನಡೆಸುವಂತಹ ಸಂಕಷ್ಟಕರ ಪರಿಸ್ಥಿತಿ ಉಂಟಾಯಿತು. ಅಲ್ಲಿಯೇ ಊಟ ತಯಾರಿಸುವುದು ಹಾಗೂ ಜೀವನ ಸಾಗಿಸುವಂತಹ ಪರಿಸ್ಥಿತಿಯಲ್ಲಿ ಸುಮಾರು ಒಂದುವರೆ ವರ್ಷಗಳ ಕಾಲ ಅವರು ಬದುಕುತ್ತಿರುವುದನ್ನು ಗಮನಿಸಿದ ಬೋಲ್ಪು ನಾಗರೀಕ ಸೇವಾ ಸಮಿತಿಯವರು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಮತ್ತು ಬಿಜೆಪಿ ಯುವ ಮೋರ್ಚಾ ಸದಸ್ಯರೊಂದಿಗೆ ಚರ್ಚಿಸಿ ಈ ವಿಷಯವನ್ನು ಶಾಸಕರ ಗಮನಕ್ಕೆ ತಂದರು.

ವಿಷಯ ತಿಳಿದ ಶಾಸಕರು ಸ್ವತಃ ಮುಂದಾಗಿ ಮನೆ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ತಿಳಿಸಿ, ಮನೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು ನೆರವಾದರು. ಅವರ ಸಹಕಾರ , ಇತರ ದಾನಿಗಳ ಸಹಕಾರ ಹಾಗೂ ಸ್ಥಳೀಯ ಕಾರ್ಯಕರ್ತರ ಪ್ರಯತ್ನದಿಂದ ಇದೀಗ ಮನೆ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದ್ದು, ಪುಷ್ಪ ಅವರಿಗೆ ನೂತನ ಮನೆ ಸಿದ್ಧವಾಗಿದೆ. ಈ ಮನೆಯನ್ನು ಶಾಸಕರು ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.

ಕಾರ್ಕಳ ತಾಲೂಕಿನಲ್ಲಿಯೇ ಅನೇಕ ಬಡ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿ ಕೊಡುವಲ್ಲಿ ವಿಶೇಷ ಪಾತ್ರ ವಹಿಸಿರುವ ಶಾಸಕರು, ಈ ಸಂದರ್ಭದಲ್ಲಿಯೂ ಬೋಲ್ಪು ನಾಗರೀಕ ಸೇವಾ ಸಮಿತಿಗೆ ಆರ್ಥಿಕ ಸಹಾಯ ನೀಡಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು ಮಹತ್ವದ ಸಹಕಾರ ನೀಡಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮ ಸಮಿತಿ ನಂದಳಿಕೆ ಅಧ್ಯಕ್ಷರಾದ ರಘುರಾಮ ರಾವ್, ತಾಲೂಕು ಕಾರ್ಯದರ್ಶಿ ಸತೀಶ್ ಪೂಜಾರಿ ಬೋಳ, ತಾಲೂಕು ಬಿಜೆಪಿ ಸದಸ್ಯರಾದ ಪ್ರಸಾದ್ ಶೆಟ್ಟಿ ಕಾಡಿಕಮಳ, ಬೆಳ್ಮಣ್ಣು ಶಕ್ತಿ ಕೇಂದ್ರದ ಅಧ್ಯಕ್ಷರಾದ ದೇವೇಂದ್ರ ಶೆಟ್ಟಿ, ಬೋಲ್ಪು ನಾಗರೀಕ ಸೇವಾ ಸಮಿತಿ ನಿರ್ದೇಶಕರಾದ ಮನೋಜ್ ಕುಮಾರ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಿತ್ಯಾನಂದ ಅಮಿನ್ ಸೇರಿದಂತೆ ಬೋಲ್ಪು ನಾಗರೀಕ ಸೇವಾ ಸಮಿತಿ ಸದಸ್ಯರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.