ಉಡುಪಿ: ಮಟ್ಟು ಗ್ರಾಮದ ಹೆಮ್ಮೆ, ರೈತರ ಭಾವನೆ ಹಾಗೂ ವಿಶ್ವಪ್ರಸಿದ್ಧ ಮಟ್ಟುಗುಳ್ಳದ ಪ್ರತೀಕವಾಗಿದ್ದ ಪ್ರತಿಕೃತಿಯನ್ನು ಇತ್ತೀಚೆಗೆ ಕಿಡಿಗೇಡಿಗಳು ಧ್ವಂಸಗೊಳಿಸಿದ್ದ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದ ಯುವಕರು ಹಾಗೂ ಸ್ಥಳೀಯರು ಒಗ್ಗೂಡಿ ಧ್ವಂಸಗೊಂಡ ಪ್ರತಿಕೃತಿಯನ್ನು ಮರುನಿರ್ಮಿಸಿ ಮಾದರಿಯಾಗಿದ್ದಾರೆ.
ಮಾಜಿ ಕೋಟೆ ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಪೂಜಾರಿ ಮಟ್ಟು ಅವರ ನೇತೃತ್ವದಲ್ಲಿ ಅವಿನಾಶ್ ಮಟ್ಟು, ನಾಗೇಶ್ ಪೂಜಾರಿ, ಸುಜಿತ್, ರೋಷನ್, ಅಮಿತ್, ಮಹೇಶ್, ರವಿ ವಿಶ್ವಕರ್ಮ, ಮನೀಶ್, ಜಗದೀಶ್ ಸೇರಿದಂತೆ ಹಲವರು ಸ್ವಯಂಪ್ರೇರಿತವಾಗಿ ಕಾರ್ಯನಿರ್ವಹಿಸಿ ಮಟ್ಟು ಗುಳ್ಳದ ಪ್ರತಿಕೃತಿಯನ್ನು ಮರುಸ್ಥಾಪಿಸಿದ್ದಾರೆ.
ಮಟ್ಟು ಗುಳ್ಳವು ಕೇವಲ ಒಂದು ಕೃಷಿ ಉತ್ಪನ್ನವಲ್ಲ. ಅದು ಗ್ರಾಮದ ಸಂಸ್ಕೃತಿ, ಪರಂಪರೆ ಹಾಗೂ ರೈತರ ಪರಿಶ್ರಮದ ಸಂಕೇತವಾಗಿದೆ. ಇಂತಹ ಪ್ರತೀಕಾತ್ಮಕ ಪ್ರತಿಕೃತಿಯನ್ನು ಧ್ವಂಸಗೊಳಿಸಿರುವು ಗ್ರಾಮಸ್ಥರಲ್ಲಿ ಬೇಸರ ಮೂಡಿಸಿದ್ದರೆ, ಇದೀಗ ಯುವಕರ ತಂಡದ ಈ ಮರುನಿರ್ಮಾಣ ಕಾರ್ಯ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.
ಸ್ಥಳೀಯರು ಈ ಕಾರ್ಯವನ್ನು ಶ್ಲಾಘಿಸಿದ್ದು, ಗ್ರಾಮ ಗೌರವವನ್ನು ಉಳಿಸುವ ನಿಟ್ಟಿನಲ್ಲಿ ಯುವಕರು ತೋರಿದ ಬದ್ಧತೆ ಅಭಿನಂದನೀಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಮರುನಿರ್ಮಾಣ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
