ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ಹೊಸ ಸಂಪುಟ ರಚನೆ ಆಗಿದೆ. 13 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ ಡಿಕೆಶಿ ಸಂಪುಟದಲ್ಲಿ ಝಮೀರ್ ಅಹಮದ್ ಖಾನ್ ಅವರಿಗೆ ಅವಕಾಶ ಸಿಕ್ಕಿಲ್ಲ. ಎರಡನೇ ಲಿಸ್ಟ್ ನಲ್ಲಿ ಅವರ ಹೆಸರು ಇರಲಿದ್ಯಾ? ಎಂಬ ಬಗ್ಗೆ ಮಾಹಿತಿ ಇಲ್ಲ.
ಇದು ಝಮೀರ್ ಅವರನ್ನು ಉದ್ದೇಶಪೂರ್ವಕವಾಗಿ ಮಾಡಿರುವ ಕಡೆಗಣನೆ ಎಂದೇ ಕಾಂಗ್ರೆಸ್ ಪಕ್ಷದ ಮುಸ್ಲಿಂ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಆದರೆ ಇದು ಉಂಟು ಮಾಡುವ ಪರಿಣಾಮ ಏನೇನು ಎಂಬುವುದು ಸದ್ಯಕ್ಕೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಸಂಪುಟದಲ್ಲಿ ಝಮೀರ್ ಅಹ್ಮದ್ ಖಾನ್ ಪ್ರಭಾವಿ ನಾಯಕರಾಗಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲೂ ಝಮೀರ್ ಪಾತ್ರ ಮಹತ್ವದ್ದಾಗಿತ್ತು. ಮುಸ್ಲಿಂ ಬೆಲ್ಟ್ ನಲ್ಲಿ ಝಮೀರ್ ಪ್ರಚಾರ ನಡೆಸಿದ್ದರು. ಆದರೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆ ಬಳಿಕ ಝಮೀರ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಡಿಕೆಶಿ ಸಂಪುಟದಲ್ಲಿ ಝಮೀರ್ ಅವರಿಗೆ ಸ್ಥಾನ ಕಲ್ಪಿಸಲಾಗಿಲ್ಲ. ಬೆಂಗಳೂರಿನ ಚಾಮರಾಜಪೇಟೆಯಿಂದ ಕಳೆದ 5 ಬಾರಿ ಸತತವಾಗಿ ಗೆಲುವು ಕಂಡಿರುವ ಝಮೀರ್, ಅವರಿಗೆ ಈ ಬಾರಿಯ ಸಂಪುಟದಲ್ಲಿ ಸ್ಥಾನ ಸಿಗದಿರುವುದು ಅವರ ಅಭಿಮಾನಿಗಳಲ್ಲಿ ಹಾಗು ಮುಸ್ಲಿಂ ಸಮುದಾಯದ ಮುಖಂಡರಲ್ಲಿ ಆಕ್ರೋಶವನ್ನುಂಟು ಮಾಡಿದೆ.
ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಸಮುದಾಯ ಪ್ರಬಲ ವೋಟ್ ಬ್ಯಾಂಕ್ ಆಗಿದೆ. ಶೇ 95 ರಷ್ಟು ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಈ ಹಿಂದೆ ಜೆಡಿಎಸ್ ಜೊತೆಗಿದ್ದ ಒಂದಿಷ್ಟು ಪ್ರಮಾಣದ ಮುಸ್ಲಿಮರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಲ್ಲಿ ಸಿದ್ದರಾಮಯ್ಯ ಸಫಲರಾಗಿದ್ದರು. ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಂ ಎಂದು ಬಿಂಬಿಸುವ ಮೂಲಕ ಮುಸ್ಲಿಂ ಸಮುದಾಯದ ಮತಗಳು ವಿಭಜನೆ ಆಗದಂತೆ ನೋಡಿಕೊಂಡಿದ್ದರು. ಇದರಲ್ಲಿ ಝಮೀರ್ ಅವರ ಪಾತ್ರವೂ ಬಹಳ ಪ್ರಮುಖವಾಗಿ ಕೆಲಸ ಮಾಡಿತ್ತು.
ಬೆಂಗಳೂರು, ಹಳೆ ಮೈಸೂರು ಹಾಗೂ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಝಮೀರ್ ಪ್ರಭಾವ ಇದೆ. ಐದು ಉಪ ಚುನಾವಣೆಗಳಲ್ಲೂ ಝಮೀರ್ ಮುಸ್ಲಿಂ ಸಮುದಾಯದ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮತಗಳನ್ನು ಕ್ರೋಡೀಕರಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸಿದ್ದರಾಮಯ್ಯ ಅವರೊಂದಿಗೆ ಆಪ್ತರಾಗಿದ್ದ ಝಮೀರ್ ಅವರು ಈ ಬಾರಿಯ ಸಂಪುಟದಿಂದ ದೂರವಿಟ್ಟಿರುವುದು ಕಾಂಗ್ರೆಸ್ ಗೆ ಮುಂದೆ ಮುಳುವಾಗುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ.
ಎರಡನೇ ಪಟ್ಟಿಯಲ್ಲೂ ಝಮೀರ್ ಅವರಿಗೆ ಸ್ಥಾನ ಸಿಗದಿದ್ದರೆ ಮುಸ್ಲಿಂ ಸಮುದಾಯದಲ್ಲಿ ಇದು ಮತ್ತಷ್ಟು ಚರ್ಚೆ ಆಗುವ ಸಾಧ್ಯತೆ ಇದೆ. ಇನ್ನೊಂದೆಡೆ ಝಮೀರ್ ಅವರಿಗೆ ಸಚಿವ ಸ್ಥಾನ ಮತ್ತೆ ನೀಡಬೇಕೆಂಬ ಕೂಗು ಕಾಂಗ್ರೆಸ್ ವಲಯದಲ್ಲಿ ಜೋರಾಗಿಯೇ ಕೇಳಿಬರುತ್ತಿದೆ.
