ಉಡುಪಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ವಿರೋಧಿಸಿ ಉಡುಪಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಖ್ಯಾತ ನಟ ಪ್ರಕಾಶ್ ರೈ ಅವರ ಕುರಿತು ಜೀವ ಬೆದರಿಕೆ ಒಡ್ಡುವ ರೀತಿಯ ಪ್ರಚೋದನಕಾರಿ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡಿರುವ ಉಡುಪಿ ಬಿಜೆಪಿ ಶಾಸಕ ತಮ್ಮ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಬೆತ್ತಲೆಗೊಳಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಯುವ ಮುಖಂಡ ಹಾಗೂ ಕಡಲತೀರ ವಲಯ ನಿರ್ವಹಣಾ ಸಮಿತಿ ಸದಸ್ಯ ಎ.ಕೆ. ಅನ್ಸಾಫ್ ಆರೋಪಿಸಿದ್ದಾರೆ.
ಜನಪ್ರತಿನಿಧಿಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಲಪಡಿಸುವ ಜವಾಬ್ದಾರಿಯನ್ನು ಹೊಂದಿದ್ದು, ದ್ವೇಷ ಮತ್ತು ಹಿಂಸೆಯನ್ನು ಪ್ರಚೋದಿಸುವ ರೀತಿಯ ಹೇಳಿಕೆಗಳು ಖಂಡನೀಯ. ಇಂತಹ ಹೇಳಿಕೆಗಳು ಸಾರ್ವಜನಿಕ ಜೀವನದ ಘನತೆಗೆ ಧಕ್ಕೆ ತರುವಂತವು ಎಂದು ಅವರು ತಿಳಿಸಿದ್ದಾರೆ.
ಜವಾಬ್ದಾರಿಯುತ ಸಾರ್ವಜನಿಕ ಹುದ್ದೆಯಲ್ಲಿರುವವರು ಸಂವಿಧಾನದ ಮೌಲ್ಯಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಹಾಗೂ ವಿವಾದಾತ್ಮಕ ಹೇಳಿಕೆ ನೀಡಿರುವ ಶಾಸಕರು ಸಾರ್ವಜನಿಕರ ಕ್ಷಮೆಯಾಚಿಸಬೇಕು, ಇಂತಹ ಪ್ರಚೋದನಕಾರಿ ಹೇಳಿಕೆ ನೀಡುವ ಮುನ್ನ ತನ್ನ ಜವಾಬ್ದಾರಿಯನ್ನು ತಿಳಿದು ಮಾತನಾಡುವುದು ಸೂಕ್ತ ಎಂದು ಎ ಕೆ ಅನ್ಸಾಫ್ ಹೇಳಿದ್ದಾರೆ.
ಬಿಜೆಪಿಗೆ ಗಾಂಧಿ ಪರಿವಾರವನ್ನು ಧ್ವಂಸ ಮಾಡೋ ಆಲೋಚನೆ ಇದೇ ಎಂದಾದರೇ ಬಿಜೆಪಿಗೆ ರಾಹುಲ್ ಗಾಂಧಿಯ ಹೋರಾಟದ ಬಗೆ ಅಪರಿಮಿತ ಭಯ ಇದೆ ಎಂದಾಯಿತು ? ಸೈದ್ದಾಂತಿಕವಾಗಿ ಎದುರಿಸಲು ಆಗದೇ ಇದ್ದಾಗ ಧ್ವೇಷದ ಮಾತು ಆಡಲಾಗಿದೆ, ಗಾಂಧಿ ಪರಿವಾರದ ಪ್ರತಿಯೊಬ್ಬರಿಗೂ ಗರಿಷ್ಠ ಭದ್ರತೆ ನೀಡಬೇಕು ಎಂದು ಎಕೆ ಅನ್ಸಾಫ್ ಹೇಳಿದರು.
ಈತನ್ಮಧ್ಯೆ ಪ್ರತಿಭಟನೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಎಫ್ಐಆರ್ ದಾಖಲಾಗಿದೆ.
