ಮಣಿದ ಕೇಂದ್ರ ಬಿಜೆಪಿ ಸರಕಾರ; CJPಯ ಹೋರಾಟ ಅಂತ್ಯ; ಮಂದಿ ಬೇಡಿಕೆ ಏನು...?

ನವದೆಹಲಿ: ಕಳೆದ 37 ದಿನಗಳಿಂದ ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಕಾಕ್ರೋಚ್‌ ಜನತಾ ಪಾರ್ಟಿ (CJP) ಕೊನೆಗೂ ಅಂತ್ಯಗೊಳಿಸಿದೆ. ಕೇಂದ್ರ ಸರ್ಕಾರ ಉಳಿದ 3 ಭರವಸೆಗಳನ್ನು ಈಡೇರಿಸುವ ಭರವಸೆ ನೀಡಿದ ಬೆನ್ನಲ್ಲೇ ಸಿಜೆಪಿ ಪ್ರತಿಭಟನೆ ಕೈಬಿಟ್ಟಿದೆ. ಜಂತರ್‌ ಮಂತರ್‌ನಲ್ಲಿರುವ ಪ್ರತಿಭಟನಾಕಾರರು ಮನೆಗೆ ತೆರಳುವಂತೆ ಸಿಜೆಪಿ ವಕ್ತಾರ ಸೌರವ್‌ ದಾಸ್‌ ಕೇಳಿಕೊಂಡಿದ್ದಾರೆ.

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ (NEET Paper Leak) ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಮಣಿದು ಇಂದು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ (Dharmendra Pradhan) ರಾಜೀನಾಮೆ ನೀಡಿದರು. ಬಳಿಕ ಸಿಜೆಪಿ ಪ್ರತಿನಿಧಿಗಳ ಜೊತೆ ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ ಮತ್ತು ಜಿತೇಂದ್ರ ಸಿಂಗ್‌ 3ನೇ ಸುತ್ತಿನ ಮಾತುಕತೆ ನಡೆಸಿದರು. ಈ ವೇಳೆ ಸಿಜೆಪಿ ಇಟ್ಟ ಉಳಿದ 3 ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. 

3ನೇ ಸುತ್ತಿನ ಮಾತುಕತೆ ಬಳಿಕ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರೊಂದಿಗೆ ಸಿಜೆಪಿ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಸುದ್ದಿಗೋಷ್ಠಿ ನಡೆಸಿದರು. ಸರ್ಕಾರ ಬೇಡಿಕೆಗಳ ಕುರಿತು ತನ್ನ ಮಾತನ್ನು ಉಳಿಸಿಕೊಳ್ಳುತ್ತದೆ ಎಂಬ ಸದ್ಭಾವನೆಯಿಂದ ಸಿಜೆಪಿ ಪ್ರತಿಭಟನೆಯನ್ನು ಕೊನೆಗೊಳಿಸಿತು.

ಒಂದು ಬೇಡಿಕೆ ಈಗಾಗಲೇ ಈಡೇರಿದೆ. ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಲಾಗುವುದು, ಭವಿಷ್ಯದಲ್ಲಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಮತ್ತು ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ನಿಯಮಗಳ ಪ್ರಕಾರ ಪರಿಹಾರವನ್ನು ನೀಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ ಎಂದು ಸಿಜೆಪಿ ವಕ್ತಾರ ತಿಳಿಸಿದ್ದಾರೆ. 

ಸರ್ಕಾರ ನಮ್ಮ ಬೇಡಿಕೆಗಳನ್ನು ಒಪ್ಪಿಕೊಂಡಿರುವುದರಿಂದ ಎಲ್ಲಾ ಪ್ರತಿಭಟನಾಕಾರರು ಮನೆಗೆ ಹೋಗಬೇಕೆಂದು ನಾವು ಮನವಿ ಮಾಡುತ್ತೇವೆ ಎಂದು ಕೇಂದ್ರ ಸಚಿವ ಸಮ್ಮುಖದಲ್ಲಿ ಸೌರವ್ ದಾಸ್ ಹೇಳಿದ್ದಾರೆ.

37 ದಿನಗಳ ಪ್ರತಿಭಟನೆಯ ನಂತರ ಸರ್ಕಾರ ನಮ್ಮ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಂಡಿದೆ. ಪ್ರತಿಭಟನಾ ಸ್ಥಳಗಳಿಂದ ಶಾಂತಿಯುತವಾಗಿ ಹಿಂದೆ ಸರಿಯುವಂತೆ ನಾವು ಎಲ್ಲರನ್ನೂ ಕೇಳಿಕೊಳ್ಳುತ್ತೇವೆ ಎಂದು ಅಶುತೋಷ್ ರಂಕಾ ತಿಳಿಸಿದ್ದಾರೆ.