ಆಡಳಿತ ವೈಫಲ್ಯ ಮರೆಮಾಚಲು ಕಾಂಗ್ರೆಸ್ ನಾಯಕರ ಪ್ರಹಸನ; ಯಶ್ಪಾಲ್ ಸುವರ್ಣ ಜೊತೆ ಜಿಲ್ಲೆಯ ಸಮಸ್ತ ದೇಶ ಪ್ರೇಮಿಗಳಿದ್ದಾರೆ: ಕುತ್ಯಾರು ನವೀನ್ ಶೆಟ್ಟಿ

ಉಡುಪಿ: ದೆಹಲಿ ಪ್ರತಿಭಟನೆಯ ದಾರಿ ತಪ್ಪಿಸಿ ದಾoಧಲೆ ನಡೆಸಿದ್ದ ಕೆಲವು ದೇಶ ವಿರೋಧಿ ವಿಛಿದ್ರಕಾರಿ ದುಷ್ಟ ಶಕ್ತಿಗಳನ್ನು ಸಾಕ್ಷಿ ಸಮೇತ ಪತ್ತೆ ಹಚ್ಚಿ ಬಂಧಿಸುವ ಸತ್ಕಾರ್ಯ ಕೇಂದ್ರ ಗೃಹ ಇಲಾಖೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ಮುತ್ತಿಗೆ ಯತ್ನದ ಸಹಿತ ವಿದೇಶ ಪ್ರವಾಸದಲ್ಲಿರುವಾಗ ಸದಾ ದೇಶ ವಿರೋಧಿ ಹೇಳಿಕೆ ನೀಡುತ್ತಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ನಡೆ ಹಾಗೂ ರಾಜ್ಯ ಸರಕಾರದ ಆಡಳಿತ ವೈಫಲ್ಯವನ್ನು ಮರೆಮಾಚಲು ಕಾಂಗ್ರೆಸ್ ನಾಯಕರು ಪ್ರಹಸನ ನಡೆಸುತ್ತಿರುವುದು ಹಾಸ್ಯಾಸ್ಪದ. ಜಿಲ್ಲೆಯ ಸಮಸ್ತ ದೇಶಭಕ್ತ ಜನತೆ ರಾಷ್ಟ್ರೀಯವಾದಿ ನಾಯಕ ಶಾಸಕ ಯಶ್ಪಾಲ್ ಸುವರ್ಣ ಅವರ ಜೊತೆಗಿದ್ದಾರೆ. ಕಾಂಗ್ರೆಸ್ಸಿನ ಯಾವುದೇ ಗೊಡ್ಡು ಬೆದರಿಕೆಗಳಿಗೆ ಜಗ್ಗುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.

ಮಣಿಪಾಲದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಘೋಷಣೆಗಳನ್ನು ಮೊಳಗಿಸಿದ ವ್ಯಕ್ತಿಗಳ ಮೇಲೆ ಯಾವುದೇ ಕ್ರಮ ಜರಗಿಸದ ಪೊಲೀಸ್ ಇಲಾಖೆ ವಿಷಯನಿಷ್ಟ ಮಾತುಗಳನ್ನಾಡಿದ ಶಾಸಕ ಯಶ್ಪಾಲ್ ಸುವರ್ಣ ಅವರ ಮೇಲೆ ಮಾತ್ರ ಎಫ್ಐಆರ್ ದಾಖಲಿಸಿರುವುದು ರಾಜ್ಯ ಗೃಹ ಇಲಾಖೆಯ ವೈಫಲ್ಯವನ್ನು ಎತ್ತಿತೋರಿಸುತ್ತದೆ. ಬಿಜೆಪಿ ಇಂತಹ ಸಾವಿರಾರು ಸವಾಲುಗಳನ್ನು ಮೆಟ್ಟಿ ನಿಂತು ಇಂದು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದು ದೇಶದೆಲ್ಲೆಡೆ ಜನಪರ ಆಡಳಿತ ನಡೆಸುತ್ತಿದೆ. ಉಡುಪಿಯಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಸೇರಿದ ಜನಸ್ತೋಮ, ಜನ ಬೆಂಬಲವನ್ನು ಕಂಡು ಕಂಗೆಟ್ಟಿರುವ ಕಾಂಗ್ರೆಸ್ ನಾಯಕರು ರಾತೋ ರಾತ್ರಿ ಪೋಲಿಸ್ ಠಾಣೆಗೆ ತೆರಳಿ ದೂರು ದಾಖಲಿಸಿರುವುದು ಅವರ ಹತಾಶ ಮನೋಭಾವಕ್ಕೆ ಸಾಕ್ಷಿ.

'ರಾಷ್ಟ್ರ ಮೊದಲು' ಎಂಬ ಚಿಂತನೆಯನ್ನು ನೆಚ್ಚಿಕೊಂಡಿರುವ ಬಿಜೆಪಿ ದೇಶದ ಏಕತೆ ಮತ್ತು ಸಮಗ್ರತೆಯ ವಿಚಾರದಲ್ಲಿ ಎಂದೂ ರಾಜಿ ಮಾಡಿಕೊಳ್ಳದು. ದೇಶದ ಘನತೆ, ಗೌರವಕ್ಕೆ ಚ್ಯುತಿ ಬಂದಾಗ ಆದನ್ನು ಯಾವುದೇ ಬೆಲೆ ತೆತ್ತು ಎದುರಿಸಲು ಬಿಜೆಪಿ ಸರ್ವ ಸನ್ನದ್ಧವಾಗಿದೆ. ಪ್ರತಿಭಟನೆಯಲ್ಲಿ ಎಂತಹ ಮಾತುಗಳನ್ನಾಡಬೇಕು ಎಂಬ ಪಾಠ ಮಾಡಲು ಕೇವಲ ಒಂದೆರಡು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ಸಿನ ನಾಯಕರಿಗೆ ಯಾವುದೇ ನೈತಿಕತೆ ಇಲ್ಲ. ಪ್ರಧಾನಿ ನಿವಾಸ ಮುತ್ತಿಗೆ ಯತ್ನ ನಡೆಸಿದ್ದ ಕಾಂಗ್ರೆಸ್ ವಿರುದ್ಧ ಬಿಜೆಪಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಛೇರಿಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರ ಮೇಲೆ ಮೊಟ್ಟೆ ದಾಳಿ ನಡೆಸಿದ ಕಾಂಗ್ರೆಸ್ಸಿನ ಗುಂಡಾ ಪ್ರವೃತ್ತಿ ಜಗಜ್ಜಾಹೀರಾಗಿದೆ.

ನೀಟ್ ಮರು ಪರೀಕ್ಷೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ಪಾರದರ್ಶಕತೆಗಾಗಿ ಶಿಕ್ಷಣ ನೀತಿಗಳಲ್ಲಿ ತಿದ್ದುಪಡಿ ತರುತ್ತಿದ್ದು ಮುಂದೆ ಆನ್ಲೈನ್ ಪರೀಕ್ಷೆ, ಆನ್ಲೈನ್ ನೀಟ್ ಕೌನ್ಸಿಲಿಂಗ್ ನಡೆಸಲು ನಿರ್ಧರಿಸಿರುವುದು ಸ್ವಾಗತಾರ್ಹ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಎಷ್ಟು ಬಾರಿ ಪರೀಕ್ಷಾ ಅಕ್ರಮಗಳು ನಡೆದಿವೆ ಹಾಗೂ ಈ ಬಗ್ಗೆ ಕಾಂಗ್ರೆಸ್ ಸರಕಾರ ಏನು ಕ್ರಮ ಕೈಗೊಂಡಿದೆ, ಎಷ್ಟು ಶಿಕ್ಷಣ ಸಚಿವರು ರಾಜೀನಾಮೆ ನೀಡಿದ್ದಾರೆ ಎಂಬ ಮಾಹಿತಿಯನ್ನೂ ಕಾಂಗ್ರೆಸ್ ಜನತೆಯ ಮುಂದಿಡುವುದು ಸೂಕ್ತ. ಪ್ರಜ್ಞಾವಂತ ಜನತೆ ಕಾಂಗ್ರೆಸ್ಸಿನ ಸಮಯ ಸಾಧಕತನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಜನ ವಿರೋಧಿ ಕಾಂಗ್ರೆಸ್ಸಿಗೆ ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.