'ನಿಮ್ಮ ಬ್ಯಾಗ್‌ಗೆ ಡ್ರಗ್ಸ್ ಪುಡಿ ಹಾಕಿ ಕೇಸು ದಾಖಲಿಸುತ್ತೇನೆ'; ಪ್ರತಿಭಟನಾ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದ ಪೊಲೀಸ್ ಚಾಲಕ ಅಮಾನತು

ಮುಂಬೈ: CJP ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ "ನಿಮ್ಮ ಬ್ಯಾಗ್‌ಗಳಲ್ಲಿ ತಲಾ 50-50 ಗ್ರಾಂ ಡ್ರಗ್ಸ್ ಪುಡಿ ಇಟ್ಟು ಪ್ರಕರಣ ದಾಖಲಿಸುತ್ತೇನೆ" ಎಂದು ಬೆದರಿಕೆ ಹಾಕಿದ ಆರೋಪದ ಮೇಲೆ ಮುಂಬೈ ಪೊಲೀಸರ ಮೋಟಾರ್ ಟ್ರಾನ್ಸ್‌ಪೋರ್ಟ್ ವಿಭಾಗದ ಚಾಲಕ ಪವನ್ ಸಾಂಗ್ಲೆ ಅವರನ್ನು ಅಮಾನತುಗೊಳಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೊದಲ್ಲಿ ಪವನ್ ಸಾಂಗ್ಲೆ ಪ್ರತಿಭಟನಾಕಾರರ ವಿರುದ್ಧ ಈ ರೀತಿಯ ಬೆದರಿಕೆ ಹಾಕಿರುವುದು ಕಂಡುಬಂದಿದೆ. ಈ ವಿಡಿಯೊ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಮುಂಬೈ ಪೊಲೀಸ್ ಇಲಾಖೆ ಇಲಾಖಾ ಕ್ರಮ ಕೈಗೊಂಡು ಅವರನ್ನು ಅಮಾನತುಗೊಳಿಸಿದೆ.

ಈ ಘಟನೆಗೆ ಸಂಬಂಧಿಸಿದಂತೆ ಇಲಾಖಾ ತನಿಖೆಯೂ ಆರಂಭಿಸಲಾಗಿದ್ದು, ಪ್ರಕರಣದ ಸಂಪೂರ್ಣ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.