'ಕಾಕ್ರೋಚಸ್'ಗಳ ಹೋರಾಟದ ಬಗ್ಗೆ ಪ್ರಕಾಶ್​ ರಾಜ್​, ರಮ್ಯಾ ಹೇಳಿದ್ದೇನು...?

ಬೆಂಗಳೂರು: ಭುಗಿಲೆದ್ದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳ ಬಗ್ಗೆ ನಡೆಯುತ್ತಿರುವ ಗದ್ದಲದ ಮಧ್ಯೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ಸೆಲೆಬ್ರಿಟಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ರಾಜೀನಾಮೆ ಅಂಗೀಕರಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಬಲವಾದ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಸೆಲೆಬ್ರಿಟಿಗಳು ವಿದ್ಯಾರ್ಥಿಗಳೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುತ್ತಿದ್ದಾರೆ ಮತ್ತು ಆ ಕ್ಷಣವನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಪ್ರಕಾಶ್ ರಾಜ್ ಹೇಳಿದ್ದು ಹೀಗೆ.... 

''ಅಭಿನಂದನೆಗಳು ಮೈ ಡಿಯರ್​ ಕಾಕ್ರೋಚಸ್​​. ಪ್ರೀತಿಯ ಸೋನಮ್ ವಾಂಗ್ಚುಕ್ ಸರ್ ಮತ್ತು ಯುವಕರ ಪರವಾಗಿ ನಿಂತ ಪ್ರತಿಯೊಬ್ಬರಿಗೂ ಅಭಿನಂದನೆಗಳು. ನೀವು ಸರ್ಕಾರವನ್ನು ಮಂಡಿಯೂರಿಸಬಹುದು ಎಂಬುದನ್ನು ಸಾಬೀತುಪಡಿಸಿದ್ದೀರಿ'' ಎಂದು ಬರೆದುಕೊಂಡಿದ್ದಾರೆ.

ರಮ್ಯಾ ಏನು ಹೇಳಿದ್ದಾರೆ ನೋಡಿ...

''ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿರುವ ಸುದ್ದಿ ಹಂಚಿಕೊಂಡು, ಬೆಸ್ಟ್ ನ್ಯೂಸ್ ಎಂದು ಬರೆದುಕೊಂಡಿದ್ದಾರೆ. ಪ್ರತಿಭಟಿಸಿದ ಎಲ್ಲಾ ವಿದ್ಯಾರ್ಥಿಗಳು ಮತ್ತು ಜನರೇ ನಿಮ್ಮ ಎಲ್ಲಾ ಪ್ರಯತ್ನಗಳು ಫಲ ನೀಡಿದವು!!'' ಎಂದು ಬರೆದುಕೊಂಡಿದ್ದಾರೆ.

26 ದಿನಗಳಿಂದ ನಡೆಸುತ್ತಿದ್ದ ಉಪವಾಸವನ್ನು ಸಾಮಾಜಿಕ ಕಾರ್ಯಕರ್ತ, ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಗುರುವಾರ ರಾತ್ರಿ ಅಂತ್ಯಗೊಳಿಸಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಬೇಕು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು, ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಬೇಕು ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸುವಂತೆ ಒತ್ತಾಯಿಸಿ ಕಳೆದ 26 ದಿನಗಳ ಕಾಲ ಆಮರಣಾಂತ ಉಪವಾಸವನ್ನು ನಡೆಸಿದ್ದರು.

ಇತ್ತೀಚೆಗೆ ಸಲ್ಮಾನ್​ ಖಾನ್​ ಸೇರಿ ಹಲವು ಸೆಲೆಬ್ರಿಟಿಗಳು ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ತಮ್ಮ ಬೆಂಬಲ ನೀಡಿದ್ದರು.