ಉಡುಪಿ: ಭಾರತದಲ್ಲಿ ದಮನಕಾರಿ ಪ್ರವೃತ್ತಿ ಮತ್ತು ಸಿದ್ಧಾಂತವನ್ನು ಜನರ ಮೇಲೆ ಹೇರುವ ಮೂಲಕ ಸಮ್ಮತಿಗೆ ಒಳಪಡಿಸುವ ತಂತ್ರವನ್ನು ಹಾಗೂ ಕಠೋರವಾದ ನಿಯಮಗಳನ್ನು ಗುಪ್ತವಾಗಿ ಜನರ ಮೇಲೆ ಹೇರಲಾಗುತ್ತಿದೆ ಎಂದು ರಂಗ ನಿರ್ದೇಶಕ ಸುರೇಶ್ ಆನಗಳ್ಳಿ ಅಭಿಪ್ರಾಯಪಟ್ಟರು.
ರಥಬೀದಿ ಗೆಳೆಯರು ಸಾಂಸ್ಕೃತಿಕ ವೇದಿಕೆ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಆಯೋಜಿಸಿದ್ದ ‘ಜನ ಸಂಸ್ಕೃತಿ–ಬಲ ಸಂಸ್ಕೃತಿ’ ಕುರಿತ ರಂಗ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿದ್ಧಾಂತ ಎಂದರೆ ನಿಂತ ನೀರಿನಂತದ್ದು. ಒಂದು ನಿರ್ದಿಷ್ಟ ವಿಚಾರವನ್ನು ಸಮಾಜ ಒಪ್ಪುವಂತೆ ಮಾಡುವ ಪ್ರಯತ್ನ ನಡೆಯುತ್ತದೆ. ಇಂತಹ ಪ್ರಕ್ರಿಯೆಗಳು ನಮ್ಮ ದೇಶದಲ್ಲಿ ಅಘೋಷಿತವಾಗಿ ನಡೆಯುತ್ತ ಬಂದಿದ್ದು, ಅದರ ಪರಿಣಾಮ ಸಾಂಸ್ಕೃತಿಕ ರಂಗದ ಮೇಲೂ ಗಂಭೀರವಾಗಿ ಬೀರುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ವಹಿಸಿದ್ದರು. ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ವಂದಿಸಿದರು. ಸಂತೋಷ್ ನಾಯಕ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು.
