ಸಿದ್ದರಾಮಯ್ಯ ಅವರೇ ನಮಗೆ ನಾಯಕ; ನಾನು ಎಲ್ಲರ ಬಳಿ ಕ್ಷಮೆ ಕೇಳಿದ್ದೇನೆ: ಝಮೀರ್ ಅಹಮದ್ ಖಾನ್

ಬೆಂಗಳೂರು: 'ನನ್ನ ಹಾಗೂ ಸಿದ್ದರಾಮಯ್ಯ ಅವರ ನಡುವಿನ ಸಂಬಂಧ ಹಳಸಿಲ್ಲ' ಎಂದು ಶಾಸಕ ಬಿ.ಝಡ್. ಝಮೀರ್ ಅಹಮದ್ ಖಾನ್ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಈ ಮೊದಲು ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಎಂದು ಹೇಳಿದ್ದೆ. ಈಗ ಡಿ.ಕೆ. ಶಿವಕುಮಾರ್ ಅವರನ್ನು ಹೈಕಮಾಂಡ್ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಆದರೂ ಸಿದ್ದರಾಮಯ್ಯ 'ಅವರೇ ನಮಗೆ ನಾಯಕ' ಎಂದರು.

'ಸಿದ್ದರಾಮಯ್ಯ ಅವರ ಬಳಿ ಯಾರೋ ನನ್ನ ವಿರುದ್ಧ ಚಾಡಿ ಹೇಳಿದ್ದಾರೆ. ನನಗೆ ಅವರ ಬಗ್ಗೆ ತುಂಬಾ ಗೌರವ ಇದೆ. ನಾನು ಅವರ ಬಳಿ ಕ್ಷಮೆ ಕೇಳಿದ್ದೇನೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬಳಿಯೂ ಕ್ಷಮೆ ಕೇಳಿದ್ದೇನೆ' ಎಂದರು.

'ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸ ಇತ್ತು. ಆದರೆ ಸಿಗಲಿಲ್ಲ, ಈಗ ಎರಡನೇ ಹಂತದಲ್ಲಿ ಸಿಗುವ ವಿಶ್ವಾಸವಿದೆ. ಒಂದು ವೇಳೆ ಪಕ್ಷದ ಕೆಲಸ ಮಾಡುವಂತೆ ಹೈಕಮಾಂಡ್ ಸೂಚಿಸಿದರೆ ಅದಕ್ಕೂ ಸಿದ್ದನಾಗಿದ್ದೇನೆ. ಆ ಕೆಲಸ ಮಾಡಿಕೊಂಡು ಹೋಗುತ್ತೇನೆ' ಎಂದರು. 

'ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ವೈರಲ್ ಆಗಿರುವ ನನ್ನ ಸಂಭಾಷಣೆ ಎನ್ನಲಾದ ಅಡಿಯೊ ನನ್ನದಲ್ಲ, ಅದು ಎಐ ಅಡಿಯೊ' ಎಂದೂ ಅವರು ಪುನರುಚ್ಚರಿಸಿದರು.