ಮಂಗಳೂರು: ಡಿ.ಐ. ಅವರ " ಶುಭ ಮುಂಜಾನೆ" ಎಂಬ ಬೆಳ್ಳಂ ಬೆಳಗಿನ ಚುಟುಕು ಗುಟುಕು ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಾ ಇದ್ದಂತೆ ಇದೀಗ 1500 ಸಂಭ್ರಮದ ಸನ್ಮಾನ. ಮಂಗಳೂರಿನ ಹೆಸರಾಂತ ಉದ್ಯಮಿ ಆಝಾದ್ ರಹ್ಮತುಲ್ಲಾಹ್ ಅವರು ಮನೆಗೆ ಕರೆಸಿ ಸರ್ಫ್ರೈಸಿಂಗ್ ಸನ್ಮಾನ ನೀಡಿದ ವಿಷಯವನ್ನು ಡಿ.ಐ. ಯವರು ಬರೆದ ಭಾರೀ ವೈರಲ್ ಲೇಖನವನ್ನು ಓದಿ ಸಂತೋಷದಿಂದಿರುವಾಗಲೇ ಡಿ.ಐ. ಅವರ ಕಾಲ್ !
"ಪೆರುವಾಯಿ ಅಸ್ಸಯ್ಯಿದ್ ಹಬೀಬುಲ್ಲಾಹ್ ತಂಙಳ್ ರವರ ನೇತೃತ್ವದಲ್ಲಿ ಪೆರುವಾಯಿ ಮಸ್ಜಿದ್ ನಲ್ಲಿ ಇಂದು ರಾತ್ರಿ ನಡೆಯಲಿರುವ ಸ್ವಲಾತ್ ಮಜ್ಲಿಸ್‌ನಲ್ಲಿ ನನಗೆ ಸನ್ಮಾನವಿದೆ, ನಿಮ್ಮ ಅದೇ ರೂಟಲ್ಲಿ ನಾನು ಹೋಗುತ್ತಿರುವುದು, ನೀವೂ ಬನ್ನಿ " ಎಂದರು.
ಸ್ವಲಾತ್ ಮಜ್ಲಿಸ್ ನಲ್ಲಿ ಭಾಗವಹಿಸುವ, ತಂಙಳ್ ರವರ ದುಆದಲ್ಲಿ ಭಾಗಿಯಾಗುವ ಅವಕಾಶದ ಜೊತೆಗೆ ನನ್ನ ಪ್ರೀತಿಯ, ಮುದ್ದಿನ ಡಿ. ಐಗೆ ಸನ್ಮಾನವಾಗುವುದನ್ನು ಕಣ್ಣು ತುಂಬಿಸಿಕೊಳ್ಳುವ ಒಂದು ಅವಕಾಶ. ಹಾಗೆಂದು ನಮ್ಮ ಮನೆ ಕಡೆಯಾಗಿಯೇ ಸಾಗುತ್ತಿರುವ ಡಿ. ಐ. ಯವರ ಕಾರು ಹತ್ತಿಕೊಂಡೆ.
ಪೆರುವಾಯಿ ಮುಚ್ಚಿರಪದವು ಮಸ್ಜಿದಲ್ಲಿ ಸಂಭ್ರಮ ನೆಲೆಸಿತ್ತು. ಭಕ್ತಿಪೂರ್ಣವಾಗಿ "ಮಹ್ಳರತುಲ್ ಬದ್ರಿಯ್ಯ" ಮತ್ತು ಸ್ವಲಾತ್ ಸಭೆ ಮುಗಿದ ಧನ್ಯ ನಿಮಿಷದಲ್ಲಿ, ಹಿರಿಯ ವಿದ್ವಾಂಸ ಪೆರುವಾಯಿ ಅಬೂಬಕರ್ ( ಸುನ್ನಿ) ಫೈಝಿಯವರ ಸಹಭಾಗಿತ್ವದೊಂದಿಗೆ ಅಸ್ಸಯ್ಯಿದ್ ಹಬೀಬುಲ್ಲಾಹ್ ತಂಙಳ್ ರವರು ಡಿ.ಐ. ಅವರಿಗೆ ಸನ್ಮಾನಿಸಿ ಆಶೀರ್ವದಿಸಿದರು.
ಪೆರುವಾಯಿ ಬದ್ರಿಯ ಜುಮಾ ಮಸ್ಜಿದ್ ಮುದರ್ರಿಸ್ ಅಶ್ರಫ್ ಅಝ್ಹರಿ ಹಿಮಮಿ, ಪೆರುವಾಯಿ ಸಿದ್ದೀಖ್ ಸಖಾಫಿ, ಸತ್ತಾರ್ ಸಖಾಫಿ, ಸ್ಥಳೀಯ ಮಸ್ಜಿದ್ ಉಸ್ತಾದ್ ಹಾರಿಸ್ ಹಿಮಮಿ ಹಾಗೂ ಊರ ಅನೇಕ ಗಣ್ಯರು ಭಾಗವಹಿಸಿದ್ದ ಸಭೆಯಲ್ಲಿ ಡಿ.ಐ. ಅವರ ಶುಭಮುಂಜಾನೆ ಖ್ಯಾತಿ ಮತ್ತು ಅವರ ಸಾಹಿತ್ಯ ಸೇವೆಯ ಕುರಿತು ಪೆರುವಾಯಿ ಸಿದ್ದೀಖ್ ಸಖಾಫಿಯವರು ಮನೋಜ್ಞ ವಿವರಣೆ ನೀಡಿದರು.
1500 ಶುಭ ಮುಂಜಾನೆ ಅಂದರೆ ಸಾಮಾನ್ಯ ಸಾಧನೆಯಲ್ಲ, ಕಿರಿದುದರಲ್ಲಿ ಹಿರಿದರ್ಥವಿರುವ ಸುಂದರ, ಅರ್ಥಸಂಪುಷ್ಠವಾದ ವಾಕ್ಯ ರಚನೆಯನ್ನು ದಿನಾಲೂ ರಚಿಸುವುದು ಒಂದು ಸಾಧನೆಯಾದರೆ ಅದನ್ನು ದಿನಾಲೂ ಬೆಳ್ಳಂಬೆಳಗ್ಗೆ 5 ಗಂಟೆಗೆ ಸಾವಿರಾರು ಮಂದಿಗೆ ಒಂದು ದಿನ ಕೂಡಾ ತಪ್ಪದೆ ಸಾವಿದೈನೂರು ದಿನಗಳ ಕಾಲ ರವಾನಿಸುವುದು ಕೂಡಾ ಅಷ್ಟೇ ದೊಡ್ಡ ಸಾಧನೆ. ಕಳೆದ ಸಾವಿರದ ಐನೂರು ದಿನಗಳಲ್ಲಿ ಒಂದು ದಿನ ಕೂಡಾ ಡಿ.ಐ. ಸುಬ್ಹ್ ನಮಾಝ್ ಕಳಾ ಮಾಡಿಲ್ಲ ಎಂಬುದಕ್ಕೆ ಕೂಡಾ ಇದೊಂದು ಅಮೋಘ ಸಾಕ್ಷಿಯಾಗಿದೆ. 1500 ದಿನಗಳಲ್ಲಿ ಒಂದು ದಿನ ಕೂಡಾ ಸುಬ್ಹ್ ನಮಾಝ್ ಕಳಾ ಆಗಿಲ್ಲ ಎಂದು ಹೇಳಿಕೊಳ್ಳಲು ಅರ್ಹರಾದವರು ಎಷ್ಟು ಜನರಿದ್ದಾರೋ ಗೊತ್ತಿಲ್ಲ. ಆದರೆ ಡಿ.ಐ. ಹೇಳದಿದ್ದರೂ ಅವರಿಗೆ ಕಳಾ ಆಗಿಲ್ಲ ಎಂದು ನಾವು ಧೈರ್ಯದಿಂದ ಹೇಳಬಹುದು. ಬೆಳಿಗ್ಗೆ ಐದು ಗಂಟೆಗೆ ಸರಿಯಾಗಿ ಸಾವಿರಾರು ಮೊಬೈಲ್ ಗಳಲ್ಲಿ ಡಿ.ಐ. ಕಳಿಸುವ ಮಸೇಜಿನ " ಟ್ವಿನ್ " ಸದ್ದು ಕೇಳಿಯೇ ಕೇಳುತ್ತದೆ. ಬಹುತೇಕರು ಬೆಳಿಗ್ಗೆ ಎದ್ದು ಮೊಬೈಲ್ ಎತ್ತಿ ಮೊಟ್ಟ ಮೊದಲು ನೋಡುವುದು ಡಿ.ಐ.ಯವರ ಇವತ್ತಿನ ಶುಭಮುಂಜಾನೆ ಏನು ಎಂದಾಗಿದೆ. ಒಂದೇ ದಿನದಲ್ಲಿ ಡಿ.ಐ. ಯವರಿಗೆ ಎರಡು ಕಡೆ ಸನ್ಮಾನ ನಡೆದುದು ಅರ್ಥಪೂರ್ಣ ಹಾಗೂ ಅರ್ಹ ಸನ್ಮಾನ.
ಸಾಲೆತ್ತೂರು ಫೈಝಿ
