ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲಿನ ದಾಳಿಗೆ ಅಮಿತ್ ಶಾ ಕಾರಣ; ಗೃಹ ಸಚಿವ ಸ್ಥಾನದಿಂದ ವಜಾಗೊಳಿಸಿ: ರಾಹುಲ್ ಗಾಂಧಿ ಒತ್ತಾಯ

ನವದೆಹಲಿ: ಜುಲೈ 20 ರಂದು ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆ ವೇಳೆ ಪೊಲೀಸ್ ಲಾಠಿಚಾರ್ಜ್ ಘಟನೆಗೆ ಗೃಹ ಸಚಿವಾಲಯವೇ ಕಾರಣ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಬುಧವಾರ ಸಂಜೆ ಇಂದಿರಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಇಂದು ಬೆಳಗ್ಗೆ ಲೋಕಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಕೇಂದ್ರ ಸರ್ಕಾರ ಉತ್ತರಿಸಬೇಕು. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಉತ್ತರಿಸಬೇಕು ಎಂದು ಆಗ್ರಹಿಸಿದೆ. ಆದರೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವಕಾಶ ನೀಡಲಿಲ್ಲ. ಸದನದಲ್ಲಿ ನಾನು ಮಾತನಾಡುವಾಗ ಮೈಕ್ ಸ್ವಿಚ್ ಆಫ್ ಮಾಡಿದರು ಎಂದು ಆರೋಪಿಸಿದರು.

ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಮೊಳೆಗಳನ್ನು ಅಳವಡಿಸಿದ ಲಾಠಿಗಳು ಮತ್ತು ಪೆಲೆಟ್ ಗನ್‌ಗಳನ್ನು ಬಳಸಿದ್ದಾರೆ. ಈ ದಮನಕಾರಿ ಕ್ರಮಕ್ಕೆ ಗೃಹ ಸಚಿವರೇ ನೇರವಾಗಿ ಆದೇಶ ನೀಡಿದ್ದರು ಅಥವಾ ಅವರಿಗೆ ಇದರ ಬಗ್ಗೆ ಅರಿವಿತ್ತು ಎಂದು ಆರೋಪಿಸಿದರು.

ಹರಿಯಾಣ, ಉತ್ತರ ಪ್ರದೇಶದ ಪೊಲೀಸರು ಹಾಗೂ ಸ್ವಯಂ ಸೇವಕರನ್ನು ಬಳಸಿ ವಿದ್ಯಾರ್ಥಿಗಳನ್ನು ಥಳಿಸಿದ್ದಾರೆ. ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲಿನ ದಾಳಿಗೆ ಅಮಿತ್ ಶಾ ಕಾರಣ, ಅವರನ್ನು ಗೃಹ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. 

ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಪೆಲೆಟ್ ಗನ್ ಬಳಸಿದ್ದಾರೆ. ಭದ್ರತಾ ಪಡೆಗಳು ಕೈಗೊಂಡ ಎಲ್ಲಾ ಕ್ರಮಗಳು ಗೃಹ ಸಚಿವಾಲಯಕ್ಕೆ ಸಂಬಂಧಿಸಿವೆ ಎಂದು ಆರೋಪಿಸಿದ ಗಾಂಧಿ, ಪೆಲೆಟ್ ಗನ್‌ಗಳನ್ನು (pellet guns) ಬಳಸಲು ಯಾರು ಆದೇಶ ನೀಡಿದರು ಎಂದು ಪ್ರಶ್ನಿಸಿದರು.

ಗೃಹ ಸಚಿವರ ಆದೇಶವಿಲ್ಲದೆ ಪೊಲೀಸರ ಕಾರ್ಯನಿರ್ವಹಿಸಲ್ಲ, ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಹೊಡೆದಿದ್ದಾರೆ. ವಿದ್ಯಾರ್ಥಿಗಳನ್ನು ತಳ್ಳಿದ್ದಾರೆ. ಕೆಳಗೆ ಬಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಜುಲೈ 20 ರಂದು ನಡೆದ ವಿದ್ಯಾರ್ಥಿಗಳ ಮೇಲಿನ ಹಲ್ಲೆಗೆ ಅಮಿತ್ ಶಾ ಅವರೇ ಕಾರಣ ಎಂದು ದೂಷಿಸಿದರು.

ಲೋಕಸಭೆಯಲ್ಲಿ ತಾವು ಮಾಡಿದ ಭಾಷಣದ ಕುರಿತು ಪ್ರಸ್ತಾಪಿಸಿದ ಗಾಂಧಿ, ತಮ್ಮನ್ನು ಕ್ಷಮೆ ಯಾಚಿಸುವಂತೆ ಕೇಳಲಾಯಿತು. ಆದರೆ ನಾನು ಅದಕ್ಕೆ ನಿರಾಕರಿಸಿದೆ. ನಾನು ಎಂದಿಗೂ ಬಿಜೆಪಿ, ಆರ್‌ಎಸ್‌ಎಸ್ ಅಥವಾ ಬೇರೆ ಯಾವುದೇ ವ್ಯಕ್ತಿಯ ಮುಂದೆ ಕ್ಷಮೆ ಯಾಚಿಸುವುದಿಲ್ಲ ಎಂದು ಅವರು ಹೇಳಿದರು.

"ನಮ್ಮ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ" ನಡೆಸುವುದು ಒಂದು ಮೂಲಭೂತ ವಿಷಯ ಎಂದು ಗಾಂಧಿ ಹೇಳಿದರು. ಪರದೆಯ ಮೇಲೆ ಶಾ ಅವರ ಫೋಟೋವನ್ನು ತೋರಿಸುತ್ತಾ ಮಾತನಾಡಿದ ರಾಹುಲ್ ಗಾಂಧಿ, ವಿದ್ಯಾರ್ಥಿಗಳೇ ನೋಡಿ, ಈತನೇ ನಿಮ್ಮನ್ನು ಹೊಡೆದ, ನಿಮ್ಮನ್ನು ಹೊಡೆದ, ನಿಮ್ಮನ್ನು ಅವಮಾನಿಸಿದ ಮತ್ತು ಪೆಲೆಟ್ ಗನ್‌ನಿಂದ ಗುಂಡು ಹಾರಿಸಿದ ವ್ಯಕ್ತಿ" ಎಂದು ಹೇಳಿದರು.

"ಅಮಿತ್ ಶಾ ಅವರನ್ನು ವಜಾಗೊಳಿಸಿ ಮತ್ತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಗೆ ಆದೇಶಿಸಿ, ವಿದ್ಯಾರ್ಥಿಗಳ ಮೇಲೆ ನಡೆದ ಕೃತ್ಯಕ್ಕೆ ನೈತಿಕ ಹೊಣೆಗಾರಿಕೆಯನ್ನು ತೆಗೆದುಕೊಳ್ಳುವ ಸಭ್ಯತೆಯನ್ನು ಹೊಂದಿ ಎಂದು ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ಹೇಳಿದರು ಮತ್ತು ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಿದ ಪ್ರತಿಯೊಬ್ಬ ವ್ಯಕ್ತಿಯನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುತ್ತದೆ ಎಂದು ಖಚಿತಪಡಿಸಿಕೊಳ್ಳುತ್ತೇವೆ, ಅದು ನಮ್ಮ ಭರವಸೆ" ಎಂದು ಅವರು ಹೇಳಿದರು.